
ಬೆಂಗಳೂರು: ಸರಗಳ್ಳತನ ನಿಯಂತ್ರಣ ಹಾಗೂ ಅವರ ಬಂಧನಕ್ಕೆ ಪೊಲೀಸರು ಹಗಲಿರುಳು ತಲೆ ಕೆಡಿಸಿಕೊಂಡಿದ್ದರೂ ಅವರ ಹಾವಳಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಮವಾರ ಬೆಳಗ್ಗೆ ನಗರದಲ್ಲಿ ಕೇವಲ 90 ನಿಮಿಷಗಳ ಅಂತರದಲ್ಲಿ 4 ಕಡೆ ವೃದ್ಧೆಯರ ಸರಗಳ್ಳತನ ವಾಗಿದೆ. ದುಷ್ಕರ್ಮಿಗಳು ಕಪ್ಪು ಪಲ್ಸರ್ ನಲ್ಲಿ ಬಂದು ವಿದ್ಯಾರಣ್ಯಪುರ, ರಾಜಾಜಿನಗರ ಮತ್ತು ಮಾಗಡಿ ರಸ್ತೆಯಲ್ಲಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆಳಗ್ಗೆ 6.30: ವಿದ್ಯಾರಣ್ಯಪುರದ ಬಿಇಎಲ್ 3ನೇ ಹಂತ 9ನೇ ಅಡ್ಡ ರಸ್ತೆಯಲ್ಲಿ ಬೆಳಗ್ಗೆ 6.30ರಲ್ಲಿ ವಾಯು ವಿಹಾರ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೃದ್ಧೆ ರತ್ನಬಾಯಿ ಎಂಬುವರ 60 ಗ್ರಾಂ ಸರವನ್ನು ಹಿಂದಿನಿಂದ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ದೋಚಿದ್ದಾರೆ. ಸರ ಎಳೆದ ರಭಸಕ್ಕೆ ರತ್ನಬಾಯಿ ಅವರ ಕತ್ತಿಗೆ ತೆರಚಿದ ಗಾಯಗಳಾಗಿವೆ. ಬೆಳಗ್ಗೆ 7.10: ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆ ಬಸವೇಶ್ವರ ಕಾಲೇಜು ಬಳಿ ಬೆಳಗ್ಗೆ 7.10ರ ಸುಮಾರಿಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಸರೋಜಾ ಬಾಯಿ ಎಂಬುವರ ಬಳಿ ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು 60 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಗೊಂಡ ಸರೋಜಾ ಬಾಯಿ ಬೈಕ್ ನಂಬರ್ ನೋಡಿಕೊಳ್ಳಬೇಕೆನ್ನುವಷ್ಟರಲ್ಲಿ ದುಷ್ಕರ್ಮಿಗಳು ಕಣ್ಮರೆಯಾಗಿದ್ದರು. ಬೆಳಗ್ಗೆ 7.20 ಇದಾದ ಹತ್ತೇ ನಿಮಿಷಗಳಲ್ಲಿ ಮಾಗಡಿ ರಸ್ತೆ ವೀನಸ್ ಸ್ಕೂಲ್ ಸಮೀಪದ ಟೋಟಲ್ ಮಾಲ್ ಬಳಿ ಲಕ್ಷ್ಮಿ ರಾಜಮ್ಮ ಅವರು ಅಂಗಡಿಯಿಂದ ಮನೆಗೆ ತೆರಳುತ್ತಿದ್ದಾಗ ಸುಮಾರು 80 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಬೆಳಗ್ಗೆ 7.30: ರಾಜಾಜಿನಗರದ 1ನೇ ಬ್ಲಾಕ್‍ನ ವಾರಿಯರ್ ಬೇಕರಿ ಬಳಿ ಹಾಲು ಖರೀದಿಗೆಂದು ತೆರಳುತ್ತಿದ್ದ ಮಂಜುಳಾ ಅವರ 20 ಗ್ರಾಂ ಸರವನ್ನು ದುಷ್ಕರ್ಮಿಗಳು ದೋಚಿದ್ದಾರೆ. ರಾಜಾಜಿನಗರ ಮತ್ತು ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ 3 ಕಡೆ ಸರ ದೋಚಿರುವ ದುಷ್ಕರ್ಮಿಗಳ ಗ್ಯಾಂಗ್ ಒಂದೇ ಆಗಿರಬಹುದು ಎನ್ನುವ ಅನುಮಾನವನ್ನು ಹಿರಿಯ ಪೊಲೀಸ್ ಅಧಿಕಾರಿ ವ್ಯಕ್ತಪಡಿಸಿದ್ದಾರೆ. ರಾಜಾಜಿನಗರದಲ್ಲಿ ನಡೆದ ಕೃತ್ಯ ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Advertisement