ಕನ್ನಡ ಮಾಧ್ಯಮದವರಿಗೆ ಸರ್ಕಾರಿ ಕೆಲಸ ಕೊಡಿ -ಎಲ್.ಹನುಮಂತಯ್ಯ

ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಕೆಲಸ ಕೊಡುವ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕನ್ನಡ ಉಳಿಸಬೇಕು ...
ವಿಧಾನಸೌಧ
ವಿಧಾನಸೌಧ
Updated on

ಬೆಂಗಳೂರು: ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಕೆಲಸ ಕೊಡುವ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕನ್ನಡ ಉಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್. ಹನುಮಂತಯ್ಯ ಒತ್ತಾಯಿಸಿದರು. ಅನಿಕೇತನ ಕನ್ನಡ ಬಳಗವು ಸೋಮವಾರ ಚಾಮರಾಜಪೇಟೆಯಲ್ಲಿರುವ ಕಸಾಪದ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಐಬಿಎಚ್ ಪ್ರಕಾಶನ ಹೊರತಂದಿರುವ ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ ಅವರ `ಅಭಿಜಾತ ಕಲಾವಿದ ಬಾಲಕೃಷ್ಣ' ಮತ್ತು `ಹಿಸ್ಟರಿ ಆಫ್ ಕರ್ನಾಟಕ' ಎಂಬ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗಡಿನಾಡಲ್ಲಿ ವಾಸವಾಗಿ ಕಷ್ಟಪಟ್ಟು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದರೆ ಅವರಿಗೆ ಕೆಲಸ ನೀಡುತ್ತಿಲ್ಲ. ಅವರು ವಾಸಿಸುವ ಪ್ರದೇಶಗಳು ಬೇರೆ ರಾಜ್ಯಗಳಿಗೆ ಸೇರಿದವು ಎಂಬ ಕಾರಣ ನೀಡಿ ಕನ್ನಡ ಮಾಧ್ಯಮದ ಮೀಸಲಾತಿ ಸಿಗುತ್ತಿಲ್ಲ. ಹೀಗಾದರೆ ಕನ್ನಡವನ್ನು ಉಳಿಸುವುದಾದರು ಹೇಗೆ? ಗಡಿನಾಡಲ್ಲೇ ಆಗಲಿ, ಒಳನಾಡಲ್ಲೇ ಆಗಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಕೆಲಸದಲ್ಲಿ ಪ್ರಾಧಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಪತ್ರ ಬರೆದು 3 ತಿಂಗಳು ಕಳೆದಿದ್ದರೂ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾವು ಪ್ರಾಧಿಕಾರದ ಅಧ್ಯಕ್ಷರಾದ ಬಳಿಕ ಕಾಸರಗೋಡಿಗೆ ನಾಲ್ಕು ಬಾರಿ ಭೇಟಿ ನೀಡಿದ್ದೇನೆ. ಕೇರಳ ಸರ್ಕಾರ ಅಲ್ಲಿನ ಕನ್ನಡಿಗರನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದೆ. ಒಂದು ರೀತಿಯಲ್ಲಿ ಮಗು ತಾಯಿಯನ್ನು ಕಳೆದುಕೊಂಡು ಅನಾಥಭಾವ ಅಲ್ಲಿನ ಕನ್ನಡಿಗರಲ್ಲಿ ಆವರಿಸಿದೆ. ಚಾಮರಾಜನಗರ ಗಡಿ ಪ್ರದೇಶವಾದ ತಾಳವಾಡಿಯಿಂದ ಹೊಸೂರುವರೆಗೂ, ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟೆಯಲ್ಲೂ ಇದೇ ಸ್ಥಿತಿ ಇದೆ. ಈ ನಡುವೆ ಅಕ್ಕಲಕೋಟೆಯಲ್ಲಿ ಸುಮಾರು ಒಂದೂವರೆ ಸಾವಿರ ಮಕ್ಕಳು ಸುಮಾರು ದೂರ ಸಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಕನ್ನಡ ಉಳಿಸುವ ಉದ್ದೇಶವಿಲ್ಲದಿದ್ದರೂ ಕಡುಬಡತನದ ಹಿನ್ನೆಲೆಯಲ್ಲಿ ಓದುತ್ತಿದ್ದಾರೆ. ಅಂತವರನ್ನು ಗುರುತಿಸಿ ಸರ್ಕಾರಿ ಕೆಲಸ ನೀಡಬೇಕು ಎಂದು ಹನುಮಂತಯ್ಯ ಅಭಿಪ್ರಾಯಪಟ್ಟರು.

ಗಡಿನಾಡ ಕನ್ನಡಿಗರು ಅತಂತ್ರರು: ತಮಿಳುನಾಡಿನ ಸರ್ಕಾರ ತಾಳವಾಡಿಯಿಂದ ಹೊಸೂರುವರೆಗಿ  ಗ್ರಾಮಗಳಲ್ಲಿ ಕಡ್ಡಾಯ ತಮಿಳು ಕಲಿಕೆ, ರಡನೇ ಭಾಷೆಯಾಗಿ ಇಂಗ್ಲಿಷ್ ಕಲಿಕೆ ಎಂಬ ಕಾನೂನು ತಂದು ಹಿಂಸೆ ನೀಡುತ್ತಿದೆ. ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಹೋಗಿರುವ ಅಲ್ಲಿನ ಕನ್ನಡಿಗರು ವಕೀಲರಿಗೆ ಶುಲ್ಕ ನೀಡಲು ಹಣವಿಲ್ಲದೆ ಪರಿತಪಿಸುತ್ತಿದ್ದಾರೆ. ಸರಿಯಾದ ವಕೀಲರು ಇಲ್ಲದಿದ್ದರೆ ನ್ಯಾಯಾಲಯದಲ್ಲಿ ವಾದಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಹಾಗೂ ರಾಜ್ಯದ ಜನತೆ ಗಡಿನಾಡ ಕನ್ನಡಿಗರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. ವಿಧಾನ ಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಡಾ. ಭೈರಮಂಗಲ ರಾಮೇಗೌಡ, ಭಾಷಾಂತರಕಾರ ಡಾ.ಎಚ್.ಎಸ್.ಎಂ. ಪ್ರಕಾಶ್, ಕೃತಿಗಳ ಲೇಖಕ ಸಿ.ವಿ.ಶಿವಶಂಕರ್, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಮಾಯಣ್ಣ, ಖಜಾಂಚಿ ಎಂ. ತಿಮ್ಮಯ್ಯ ಭಾಗವಹಿಸಿದರು .

ಬಾಲಣ್ಣಗೆ ಬಂದ ಸ್ಥಿತಿ ಮತ್ಯಾರಿಗೂ ಬಾರದಿರಲಿ
ಕನ್ನಡ ಚಿತ್ರರಂಗದ ಅಬಿsಜಾತ ಕಲಾವಿದರಲ್ಲಿ ಒಬ್ಬರಾದ ಬಾಲಕೃಷ್ಣ ಅವರು ತಮ್ಮ ಕಡೆಯ ದಿನಗಳಲ್ಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಕೊನೆ ಕೊನೆಗೆ ಔಷಧ ಕೊಂಡುಕೊಳ್ಳಲು ಹಣವಿಲ್ಲ ದಿನಗಳನ್ನು ಕಳೆದಿದ್ದಾರೆ. ಅವರ ಸ್ಥಿತಿ ಮತ್ಯಾವ ಕಲಾವಿದರಿಗೂ ಬಾರದಿರಲಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು.
ಬಾಲಕೃಷ್ಣ ಮತ್ತು ನರಸಿಂಹರಾಜು ಅವರು ಅತ್ಯುತ್ತಮ ಹಾಸ್ಯನಟರಾಗಿದ್ದರರು. ಇಡೀ ಕುಟುಂಬ ಬಂದು ಸಿನೆಮಾ ನೋಡುವಷ್ಟರ ಮಟ್ಟಿಗೆ ಹಾಸ್ಯದ ಹೊನಲನ್ನು ಹರಿಸುತ್ತಿದ್ದರು. ಬಾಲಣ್ಣನ ಕಷ್ಟದ ದಿನದಲ್ಲಿ ಸಹಾಯ ಮಾಡಲು ಸರ್ಕಾರ ಮುಂದೆ ಬರಲಿಲ್ಲ. ಮತ್ತೊಬ್ಬರಿಗೆ ಸಹಾಯ ಮಾಡುವಷ್ಟರ ಮಟ್ಟಕ್ಕೆ ಇತರೆ ಕಲಾವಿದರೂ ಬೆಳೆದಿರಲಿಲ್ಲ. ಆದರೆ ಇಂದಿನ
ದಿನಗಳಲ್ಲಿ ಕೆಲವರು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಕಷ್ಟದಲ್ಲಿರುವ ಕಲಾವಿದರ ನೆರವಿಗೆ ಆ ಕಲಾವಿದರು ಧಾವಿಸಬೇಕು. ಕಾರ್ಪೋರೇಟ್ ಸಂಸ್ಥೆಗಳೂ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com