ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಪೂರ್ಣ
ಬೆಂಗಳೂರು: ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯಲಿರುವ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್ ಹೇಳಿದರು. ಗುರುವಾರ ನಗರ ಪೊಲೀಸ್ ಆಯುಕ್ತರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವೇಳೆ ವಾಯುಪಡೆಯ ಹೆಲಿಕಾಪ್ಟರ್‍ನಿಂದ ಪುಷ್ಪವೃಷ್ಟಿ ನಡೆಯಲಿದೆ. ಕವಾಯತು ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2,450 ಮಕ್ಕಳು ಭಾಗವಹಿಸಲಿದ್ದಾರೆ ಎಂದರು. ಅತಿಥಿಗಳು, ಗಣ್ಯರು, ಸೇನಾ ಸಿಬ್ಬಂದಿ, ನಿವೃತ್ತ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಸಮಾರಂಭದಲ್ಲಿ ಭಾಗವಹಿಸುವವರಿಗಾಗಿ 11 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಬಂದೋಬಸ್ತ್: ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಖ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ನಿರ್ಧಿಷ್ಟ ಬೆದರಿಕೆ ಇಲ್ಲವಾದರೂ ಭಾರಿ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ ಎಂದರು. ಮೈದಾನದ ಒಳಗೆ ಹೊರಗೆ ಭದ್ರತೆಗಾಗಿ 9ಡಿಸಿಪಿಗಳು, 16 ಎಸಿಪಿ, 48 ಇನ್‍ಸ್ಪೆಕ್ಟರ್‍ಗಳು, 116 ಸಬ್ ಇನ್‍ಸ್ಪೆಕ್ಟರ್‍ಗಳು, 77 ಎಎಸ್ಸೈ, 182 ಹೆಡ್ ಕಾನ್‍ಸ್ಟೆಬಲ್‍ಗಳು, 553 ಕಾನ್ ಸ್ಟೆಬಲ್‍ಗಳು ಹಾಗೂ 185 ಸಿವಿಲ್ ಉಡುಪಿನ ಅಧಿಕಾರಿಗಳು ಸೇರಿದಂತೆ ಒಟ್ಟು 1326 ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು. ಕೆಎಸ್‍ಆರ್‍ಪಿಯ 6 ಮತ್ತು 2 ಕ್ಷಿಪ್ರ ಕಾರ್ಯಾಚರಣೆ ಪಡೆಗಳೂ ಇವೆ.
ಸಂಚಾರ ಬದಲಾವಣೆ
ಆ.15ರ ಬೆಳಗ್ಗೆ 8ರಿಂದ ಬೆ.10.30ರವರೆಗೆ ಕಬ್ಬನ್‍ರಸ್ತೆಯಲ್ಲಿ ಬಿ.ಆರ್. ಜಂಕ್ಷನ್‍ನಿಂದ ಕಾಮರಾಜ ರಸ್ತೆ ಜಂಕ್ಷನ್‍ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಈ ವೇಳೆಯಲ್ಲಿ ಪರ್ಯಾಯ ಮಾರ್ಗ ಬಳಸಬೇಕು ಎಂದು ಸಂಚಾರ ಪೊಲೀಸರು ಕೋರಿದ್ದಾರೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ
- ವಾಯುಪಡೆಯ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ
- ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2,450 ಮಕ್ಕಳು
- ಭದ್ರತೆಗೆ 1,326 ಪೊಲೀಸ್ ಸಿಬ್ಬಂದಿ ನಿಯೋಜನೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ