
ಮಂಗಳೂರು: ಸುರತ್ಕಲ್‍ನ ಜೋಕಟ್ಟೆ ಪರಿಸರದ ಮಂದಿಯ ನಿದ್ದೆಗೆಡಿಸುತ್ತಿರುವ ಎಂಆರ್‍ಪಿಎಲ್ 3ನೇ ಕೋಕ್ ಮತ್ತು ಸಲ್ಫರ್ ಘಟಕದ ಹಾರುಬೂದಿ ಈಗ ಕೆಂಜಾರು ಪರಿಸರಕ್ಕೆ ವ್ಯಾಪಿಸಿದೆ.
ಹಾರುಬೂದಿ ಸಮಸ್ಯೆಯಿಂದ ಕಂಗೆಟ್ಟಿದ್ದ ಮಂದಿ, ಸ್ಥಳಕ್ಕೆ ಆಗಮಿಸಿದ ಎಂಆರ್ ಪಿಎಲ್ ಅಧಿಕಾರಿಯ ಬೆನ್ನಿಗೆ ಹಾರುಬೂದಿ ಬಳಿದು ಪ್ರತಿಭಟಿಸಿದ್ದಾರೆ. ಶನಿವಾರ ಭಾನುವಾರ ಬೆಳಗ್ಗೆವರೆಗೆ ಹಾರುಬೂದಿ ಊರಿನ ಮೇಲೆ ಬಿದ್ದಿದೆ. ಅಂಗಳದಲ್ಲಿ ಹಾಕಿದ ಬಟ್ಟೆ, ವಾಹನ, ಮನೆಗೆ ಬೂದಿಯ ಸಿಂಚನ ಆಗಿದೆ. ಸಲ್ಫರ್ ವಾಸನೆಯಿಂದ ಕಂಗಾಲಾದ ಕೆಂಜಾರು ನಾಗರಿಕರು ರಾತ್ರಿಯೇ ಎಂಆರ್‍ಪಿಎಲ್ ಮತ್ತು ಪರಿಸರ ಅಧಿಕಾರಿಗಳಿಗೆ ದೂರು ನೀಡಿದ್ದರು.
ಭಾನುವಾರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಸಮಜಾಯಿಷಿಯಿಂದ ಅಸಮಾಧಾನಗೊಂಡ ನಾಗರಿಕರು ಎಂಆರ್‍ಪಿಎಲ್ ಅಧಿಕಾರಿಯೊಬ್ಬರ ಬೆನ್ನಿಗೆ ಹಾರುಬೂದಿ ಎರಚಿದರು. ಈ ಘಟಕಕ್ಕೆ ಪರಿಸರ ಇಲಾಖೆಯ ಅನುಮತಿ ಜೂ.30ಕ್ಕೆ ಮುಗಿದಿದ್ದರೂ ನವೀಕರಣಗೊಂಡಿಲ್ಲ, ಆದರೂ ಘಟಕ ಕಾರ್ಯಾಚರಿಸುತ್ತಿರುವ ಬಗ್ಗೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಅದೇ ದಾರಿಯಲ್ಲಿ ಹೋಗುತ್ತಿದ್ದ ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಕೂಡ ಅಹವಾಲು ಕೇಳಲು ಆಗಮಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು. ಘಟಕದ ಪರವಾನಗಿ ನವೀಕರಣಕ್ಕೆ ಬೆಂಗಳೂರಿನ ಕಚೇರಿಗೆ ಕಳುಹಿಸಲಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
Advertisement