
ಬೆಂಗಳೂರು: ರೆಸಿಡೆನ್ಸಿ ರಸ್ತೆಯಲ್ಲಿರುವ ಟೈಮ್ಸ್ ಪಬ್ ಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿದ ದುಷ್ಕರ್ಮಿಗಳು ಪಬ್ ಮಾಲೀಕನ ಮೇಲೆ ಗುಂಡು ಹಾರಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮಂಗಳೂರು ಮೂಲದ ಚೇತನ್ ಅಲಿಯಾಸ್ ಅಕ್ತರ್ ಸಮಿ (42) ಗಾಯಗೊಂಡವರು. ಇವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ನಿಗಾದಲ್ಲಿ ಇರಿಸಲಾಗಿದ್ದು ಏನು ಹೇಳಲಾಗದು ಎಂದು ವೈದ್ಯರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಚೇತನ್ ಅವರು ಸ್ನೇಹಿತರೊಂದಿಗೆ
ಸಹಭಾಗಿತ್ವದಲ್ಲಿ ರೆಸಿಡೆನ್ಸಿ ರಸ್ತೆಯಲ್ಲಿ ಕೆಲ ವರ್ಷಗಳಿಂದ ಪಬ್ ನಡೆಸುತ್ತಿದ್ದರು. ಚೇತನ್ ಅವರನ್ನೇ ಗುರಿಯಾಗಿಸಿಕೊಂಡಿದ್ದ ದುಷ್ಕರ್ಮಿಗಳು ರಾತ್ರಿ 10 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಪಬ್‍ಗೆ ಬಂದ ಇಬ್ಬರು, ಬಿಯರ್ ತರಿಸಿಕೊಂಡು ಕುಡಿದಿದ್ದಾರೆ. ಈ ವೇಳೆ ಚೇತನ್ ಅವರು ಪಬ್‍ಗೆ ಬಂದಿದ್ದ ಅತಿಥಿ ಜತೆ ಮಾತನಾಡಿ ಒಂದು ಕೊಠಡಿಯಿಂದ ಮತ್ತೊಂದು ಕೊಠಡಿ ಕಡೆ ತೆರಳುತ್ತಿದ್ದರು.
ಇದೇ ಸೂಕ್ತ ಸಮಯ ಎಂದು ಭಾವಿಸಿದ ದುಷ್ಕರ್ಮಿಗಳು ಅವರನ್ನೇ ಹಿಂಬಾಲಿಸಿಕೊಂಡು ಹೋಗಿ ಬೆನ್ನಿಗೆ ಪಿಸ್ತೂಲ್ ಇಟ್ಟು ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಪ್ರಾಣಾಪಾಯವಾಗಿರುವುದನ್ನು ಅರಿತ ಚೇತನ್ ಮುಂದಕ್ಕೆ ಓಡಲು ಯತ್ನಿಸುತ್ತಿದ್ದರು. ಅಷ್ಟರಲ್ಲೇ ದುಷ್ಕರ್ಮಿಗಳು ಹೊರಗೆ ಹೋಗಲು ಪಬ್‍ನ ಬಾಗಿಲು ಬಳಿ ತೆರಳಿ ಮತ್ತೊಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆ ಎರಡನೇ ಗುಂಡು ಗೋಡೆಗೆ ಬಡಿದಿದೆ. ಗುಂಡೇಟು ತಿಂದು ಕುಸಿದು ಬಿದ್ದ ಚೇತನ್ ಅವರನ್ನು ಪಬ್ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ವೇಳೆ ಪಬ್‍ನಲ್ಲಿ ಗ್ರಾಹಕರು ಇದ್ದರು.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಚೇತನ್ ಅವರ ವಿರುದ್ಧ ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿದೆಯಾ ಎನ್ನುವುದು ಗೊತ್ತಾಗಿಲ್ಲ. ಅವರ ವಿರುದ್ಧ ಯಾವುದಾದರೂ ಅಪರಾಧ ಪ್ರಕರಣಗಳು ಇರುವ ಬಗ್ಗೆ ಮಾಹಿತಿ ಸದ್ಯಕ್ಕೆ ಕಂಡು ಬಂದಿಲ್ಲ. ಅವರು ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾತ್ರಿ ವೇಳೆ ಘಟನೆ ನಡೆದಿದ್ದು ರಸ್ತೆಯಲ್ಲಿ ಹೆಚ್ಚಿನ ಜನರ ಓಡಾಟವಿತ್ತು. ಅಲ್ಲದೇ ದುಷ್ಕರ್ಮಿಗಳ ಕೈಯ್ಯಲ್ಲಿ ಪಿಸ್ತೂಲ್ ಇದ್ದ ಕಾರಣ ಅವರನ್ನು ಹಿಡಿಯುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. ಹೀಗಾಗಿ, ದುಷ್ಕರ್ಮಿಗಳು ಯಾವ ವಾಹನದಲ್ಲಿ ಬಂದಿದ್ದರು ಎನ್ನುವ ಮಾಹಿತಿ ಇಲ್ಲ. ಆದರೆ, ರಸ್ತೆ ಹಾಗೂ ಬೇರೆ ಮಳಿಗೆಗಳಲ್ಲಿರುವ ಸಿಸಿ ಕ್ಯಾಮೆರಾಗಳ ವಶಕ್ಕೆ ಪಡೆದು ಪರಿಶೀಲನೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
Advertisement