ಎನ್‍ಐಎಯಿಂದ ಶಂಕಿತ ವ್ಯಕ್ತಿಯ ವಿಚಾರಣೆ?

ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದಾಗ ಬಂಧನಕ್ಕೊಳಗಾದ ಮಹಮ್ಮದ್ ಹುಸೇನ್ ಅಲಿ ಖುರೇಶಿಯನ್ನು ಬುಧವಾರ ರಾತ್ರಿ ಪೊಲೀಸರು ಕಲಬುರಗಿಗೆ ಕರೆದೊಯ್ದಿದ್ದು, ಅಲ್ಲಿನ ಪೊಲೀಸರ ಜತೆಗೆ ಸೇರಿ ಜಂಟಿಯಾಗಿ ವಿಚಾರಣೆ ನಡೆಸಲಾಗುತ್ತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದಾಗ ಬಂಧನಕ್ಕೊಳಗಾದ ಮಹಮ್ಮದ್ ಹುಸೇನ್ ಅಲಿ ಖುರೇಶಿಯನ್ನು ಬುಧವಾರ ರಾತ್ರಿ ಪೊಲೀಸರು ಕಲಬುರಗಿಗೆ
ಕರೆದೊಯ್ದಿದ್ದು, ಅಲ್ಲಿನ ಪೊಲೀಸರ ಜತೆಗೆ ಸೇರಿ ಜಂಟಿಯಾಗಿ ವಿಚಾರಣೆ ನಡೆಸಲಾಗುತ್ತಿದೆ.

ಒಂದು ವೇಳೆ ನಮ್ಮ ಶಂಕೆ ನಿಜವಾದರೆ ಬಹುದೊಡ್ಡ ವಿಧ್ವಂಸಕ ಕೃತ್ಯ ವನ್ನು ತಡೆಯುವಲ್ಲಿ ಯಶಸ್ಸು ಸಾಧಿಸಿದಂ ತಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಎಸ್. ರವಿ ಹೇಳಿದ್ದಾರೆ. ಮೂಲಗಳ ಪ್ರಕಾರ ಪ್ರಕರಣದ ಪ್ರಾಥಮಿಕ ತನಿಖೆಯ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತಂಡವೂ ಹೆಚ್ಚಿನ ವಿಚಾರಣೆಗಾಗಿ ಬೆಳಗಾವಿಗೆ ಆಗಮಿಸುವ ನಿರೀಕ್ಷೆ ಇದೆ.

ಸದ್ಯ ಖುರೇಶಿ ಕುರಿತು ಯಾವುದೇ ಒಂದು ನಿರ್ಧಾರಕ್ಕೆ ಬರಲು ಪೊಲೀಸರು ನಿರಾಕರಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಆತ ಯಾವ ಉದ್ದೇಶಕ್ಕೆ ರಾಜ್ಯದ ವಿವಿಧ ನಗರಗಳಲ್ಲಿನ ವಿಮಾನ, ರೈಲ್ವೆ, ಬಸ್ ನಿಲ್ದಾಣಗಳ ಫೋಟೋ ತೆಗೆದಿದ್ದಾನೆ ಎಂಬುದು ಬೆಳಕಿಗೆ ಬರಲಿದೆ ಎಂದರು.ಈತನ ಬ್ಯಾಂಕ್ ಖಾತೆಗೆ ವ್ಯಕ್ತಿಯೊಬ್ಬ ರು.5 ಸಾವಿರ ಹಾಕಿ ಫೋಟೋ ತೆಗೆಯುವಂತೆ ಸೂಚಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಹಣ ಹಾಕಿದವರ ಬಗ್ಗೆ ಪೊಲೀಸ್ ರಿಗೆ ಸುಳಿವು ಸಿಕ್ಕಿದೆ. ಈತ ಕೇವಲ ವಿಮಾನ ನಿಲ್ದಾಣದ ಫೋಟೋ ಅಷ್ಟೇ ಅಲ್ಲ, ವಿಮಾನದ ಆಗಮನ, ನಿರ್ಗಮನದ ವಿಡಿಯೋ ಚಿತ್ರೀಕರಣ, ವೇಳಾಪಟ್ಟಿಯ ಫೋಟೋ ತೆಗೆದಿದ್ದಾನೆ. ಅಲ್ಲದೆ, ಬೆಳಗಾವಿ ಹೋಂಡಾ ಶೋರೂಂ, ವಿಟಿಯು ಕ್ಯಾಂಪಸ್ ನ ಫೋಟೋಗಳು, ಸ್ವಾಗತ ಕಮಾನು, ಹೊಸ ಕಟ್ಟಡ, ವಿವಿಯ ಒಳ ಮತ್ತು ಹೊರ ರಸ್ತೆಗಳು, ಕ್ಯಾಂಟೀನ್, ಗಡಿಯಾರಗಳ ಫೋಟೋ, ಚಿತ್ರೀಕರಣ ಆತನ ಲ್ಯಾಪಟಾಪ್ ನಲ್ಲಿ ಪತ್ತೆಯಾಗಿದೆ. ಇದರ ಜೊತೆ ಮಾರ್ಕೆಟ್ ನಲ್ಲಿರುವ ಮಸೀದಿ, ಮುಜಾವರ ಸಿಹಿ ಅಂಗಡಿ, ಬೋಗಾರವೇಸ್ ಪಾರ್ಕಿಂಗ್ ಸ್ಥಳ, ಎಸ್‍ಬಿಐ ಕೇಂದ್ರ ಕಚೇರಿಯ ಫೋಟೋ ಕೂಡ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ವಿಧಾನಸೌಧ ಫೋಟೋ: ಬೆಳಗಾವಿ ಮಾತ್ರವಲ್ಲ ಧಾರವಾಡ ಹೊಸ ಬಸ್ ನಿಲ್ದಾಣ, ಬಸ್‍ಗಳ ವೇಳಾಪಟ್ಟಿ, ಹುಬ್ಬಳಿ ವಿಮಾನ ನಿಲ್ದಾಣ, ಹುಬ್ಬಳ್ಳಿ ರೈಲು ನಿಲ್ದಾಣ ಫೋಟೋ, ರೈಲುಗಳ ವೇಳಾಪಟ್ಟಿ. ಜತೆಗೆ ಹುಬ್ಬಳ್ಳಿಯ ರೈಲು ಹಳಿ ಮತ್ತು ಗದಗದ ರೈಲು ಹಳಿಗಳು ಹಾಗೂ ಆಲಮಟ್ಟಿ ಎಂದು ಹಿಂದಿಯಲ್ಲಿ ಬರೆದಿರುವ ನಾಮಫಲಕ, ಬೆಂಗಳೂರಿನ ವಿಧಾನ ಸೌಧ, ಮೈಸೂರು
ಪ್ಯಾಲೇಸ್, ಬಿಎಂಟಿಸಿ ಕಟ್ಟಡದ ಫೋಟೋಗಳನ್ನು ತೆಗೆದಿರುವುದು ಪತ್ತೆಯಾಗಿದೆ.

ಮೂವರ ವಶ?: ಖುರೇಶಿ ನೀಡಿರುವ ಮಾಹಿತಿ ಆಧರಿಸಿ ಕಲಬುರಗಿಯಲ್ಲಿ ಗುರುವಾರ ಉರ್ದು ಪತ್ರಿಕೆಗೆ ಸೇರಿದ ಛಾಯಾಗ್ರಾಹಕ ಸೇರಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ಪೊಲೀಸ್ ಆಯುಕ್ತ ರವಿ ಮಾತ್ರ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಸ್ಪೋಟದ ವೇಳೆಯೂ ಇದ್ದ: ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಪೋಟದ ವೇಳೆ ಈತ ಬೆಂಗಳೂರಿನಲ್ಲೇ ಇದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈತನ ಮೊಬೈಲ್ ಕಾಲ್‍ಗಳ ವಿವರ ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈತನ ಮೊಬೈಲ್ ಗೆ ಹೊರ ದೇಶದಿಂದಲೂ ದೂರವಾಣಿ ಕರೆ ಬಂದಿದೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿ 14 ರಾಜ್ಯ ಸುತ್ತಾಡಿರುವ ಮಾಹಿತಿಯೂ ಲಭ್ಯವಾಗಿ ದೆ. ಗಣ್ಯ ವ್ಯಕ್ತಿಗಳ ಮೊಬೈಲ್ ನಂಬರ್ ಸಹ ಈತನ ಲ್ಯಾಪ್ ಟಾಪ್‍ನಲ್ಲಿ ಸಿಕ್ಕಿದೆ ಎನ್ನಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗು ತ್ತಿದ್ದು, ಹೆಚ್ಚಿನ ವಿಚಾರಣೆಗೆ ಎನ್‍ಐಎ ತಂಡವೂ ಬೆಳಗಾವಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com