ಹುತಾತ್ಮ ಯೋಧರಿಗೆ ಭಾವ ನಮನ

ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ 44ನೇ ವಿಜಯ ದಿವಸವನ್ನು ಬುಧವಾರ ನಗರ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹಮ್ಮಿಕೊಳ್ಳಲಾಗಿತ್ತು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ 44ನೇ ವಿಜಯ ದಿವಸವನ್ನು ಬುಧವಾರ ನಗರ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ
ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಸೈನಿಕ ಸ್ಮಾರಕ ಮಾ್ಯನೇಜ್‍ಮೆಂಟ್ ಟ್ರಸ್ಟ್ ಆಯೋಜಿಸಿದ್ದ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭಾಗವಹಿಸಿ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಇವರೊಟ್ಟಿಗೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನ ಪರಿಷತ್ ಪ್ರತಿಪಕ್ಷ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಸೇರಿದಂತೆ ವಿವಿಧ ಸೇನಾ ತುಕಡಿಯ ಹಿರಿಯ ಅಧಿಕಾರಿಗಳು ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ಹೊಸದೊಂದು ದೇಶ, ಸಮಾಜವನ್ನು ಸೃಷ್ಟಿ ಮಾಡಲು ನಮ್ಮ ಅನೇಕ ಯೋಧರು ಹುತಾತ್ಮರಾದರು. ಅವರನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಮುಂದಿನ ಯುವ ಪೀಳಿಗೆಗೆ ನಮ್ಮ ಇತಿಹಾಸ, ಯೋಧರ ಹೋರಾಟ, ತ್ಯಾಗ, ಬಲಿದಾನವನ್ನು ತಿಳಿಸಿದರೆ ಉಳಿಯುತ್ತೆ. ಪ್ರಾಣ ತೆತ್ತು ಈ ದೇಶದ ರಕ್ಷಣೆಗೆ ಹೋರಾಟ ಮಾಡಿದ ಯೋಧರಿಗೆ ಸರ್ಕಾರ ಪರವಾಗಿ ಗೌರವ ಸಲ್ಲಿಸುತ್ತೇವೆ. ನಿವೃತ್ತಿಯಾದ ಯೋಧರಿಗೆ ಒಂದಿಷ್ಟು ಜಮೀನು ನೀಡುವ ಪರಿಪಾಠ ಬೆಳೆದುಬಂದಿದೆ. ಯೋಧರು ಕೃಷಿಗೆ ಜಮೀನು ಕೇಳಿ ಪ್ರಸ್ತಾವನೆ ಇಟ್ಟರೆ ಪುರಸ್ಕರಿಸಲಾಗುವುದು ಎಂದರು.

ಭಾರತ ಮತ್ತು ಭಾರತೀಯ ಸೇನೆಯ ಇತಿಹಾಸದಲ್ಲಿ 1971 ಡಿಸೆಂಬರ್ 16 ಅವಿಸ್ಮರಣೀಯ ದಿನ. ಈ ದಿನ ಬಾಂಗ್ಲಾ ವಿಮೋಚನೆಗಾಗಿ ಪಾಕಿಸ್ತಾನ ಸೇನೆಯೊಂದಿಗೆ ಭಾರಿ ಯುದ್ಧವೇ ನಡೆಯಿತು. ಬಲಿಷ್ಠ ಭಾರತ ಸೇನೆಯ ಹೊಡೆತಕ್ಕೆ ಬೆಚ್ಚಿಬಿದ್ದ ಪಾಕ್ ಸೇನೆ ಕಡೆಗೆ ಸೋತು ಶರಣಾಯಿತು. ಪಾಕಿಸ್ತಾನ ಸೇನೆಯ 91,000 ಸೈನಿಕರ ಶರಣಾಗತಿಯನ್ನು ಭಾರತೀಯ ಸೇನೆ ಅಂಗೀಕರಿಸಿತು. ಇದು ವಿಶ್ವದ ಸೇನಾ ಇತಿಹಾಸದಲ್ಲಿ ಆದ ಏಕೈಕ ಅತಿ ಹೆಚ್ಚು ಸಂಖ್ಯೆಯ ಸೇನಾಪಡೆಗಳ ಶರಣಾಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಡಿಸೆಂಬರ್ 16 ರನ್ನು ವಿಜಯ್ ದಿವಸ್ ಆಗಿ ಅಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಭೂಸೇನೆ, ವಾಯುಸೇನೆ, ನೌಕಾ ಸೇನೆಯ ಯೋಧರು, ಎನ್‍ಸಿಸಿ ಕೆಡೆಟ್ಸ್‍ಗಳು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com