ಬಿಬಿಎಂಪಿಗೆ ವರವಾಯ್ತು ಆದೇಶ

ಕಸ ವಿಂಗಡಿಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಹೈಕೋರ್ಟ್ ನೀಡಿರುವ `2 ಬಕೇಟ್, 1 ಚೀಲ' ಸೂತ್ರದ ಆದೇಶ ವರವಾಗಿ ಪರಿಣಮಿಸಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಕಸ ವಿಂಗಡಿಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಹೈಕೋರ್ಟ್ ನೀಡಿರುವ `2 ಬಕೇಟ್, 1 ಚೀಲ' ಸೂತ್ರದ ಆದೇಶ ವರವಾಗಿ ಪರಿಣಮಿಸಿದೆ.

ನಗರದ ವಾಸಿಗಳು ಕಸ ವಿಂಗಡಿಸದೆ ನಿರ್ಲಕ್ಷ್ಯ ತೋರುತ್ತಿದ್ದರಿಂದ ಅನಿವಾರ್ಯವಾಗಿ ಮಿಶ್ರ ಕಸವನ್ನೇ ಸಂಸ್ಕರಣ ಘಟಕಗಳಿಗೆ ಸಾಗಿಸಬೇಕಾಗಿತ್ತು. ಇದರಿಂದಾಗಿ ಸಮರ್ಪಕ ಕಸ ವಿಲೇವಾರಿ ಅಸಾಧ್ಯವಾಗಿತ್ತು. ವಿಂಗಡಿಸಿದ ಕಸವನ್ನೇ ಕಡ್ಡಾಯವಾಗಿ ಪಡೆಯುವುದಾಗಿ ಸಂಸ್ಕರಣ ಘಟಕಗಳೂ ತಾಕೀತು ಮಾಡಿದ್ದವು.

ಹೀಗಾಗಿ ಬಿಬಿಎಂಪಿ ಮೂರು ವಾರಗಳಿಂದ ನಗರದೆಲ್ಲೆಡೆ ಬೀದಿ ನಾಟಕ, ಜಾಥಾ, ಶಾಲಾ-ಕಾಲೇಜುಗಳಲ್ಲಿ ಅರಿವು ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನಡೆಸುವ ಮೂಲಕ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು. ಹೀಗಿರುವಾಗಲೇ ಕೋರ್ಟ್ ನೀಡಿರುವ ಈ ಆದೇಶ ಪಾಲಿಕೆಗೆ ಸಿಕ್ಕ ಬಲ ಎಂಬಂತಾಗಿದೆ. ಕಸ ವಿಂಗಡಣೆಗೆ 2 ಬಕೇಟ್ ಮತ್ತು 1 ಚೀಲ ಸೂತ್ರವನ್ನು ಮನೆಯಲ್ಲೇ ಅಳವಡಿಸಿಕೊಳ್ಳಬೇಕು ಎಂದು ಕೋರ್ಟ್ ಆದೇಶ ನೀಡಿದೆ.

ವಾಣಿಜ್ಯ ಕೇಂದ್ರಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು, ಅಪಾರ್ಟ್‍ಮೆಂಟ್‍ಗಳು, ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಶಿಕ್ಷಣ ಸಂಸ್ಥೆ, ಮಾಲ್, ಅಂಗಡಿ, ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಈ ಸೂತ್ರ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದೂ ಕೋರ್ಟ್ ಸೂಚಿಸಿದೆ. ಒಂದು ವೇಳೆ ಆದೇಶ ಪಾಲಿಸದಿದ್ದರೆ, `ಘನ ತ್ಯಾಜ್ಯ ನಿರ್ವಹಣಾ ಕಾಯ್ದೆ 2015' ಮತ್ತು `ಕರ್ನಾಟಕ ನಗರ ಪಾಲಿಕೆ ಕಾಯ್ದೆ-1976ರ 431 ಎ' ನಿಯಮದ ಅನುಸಾರ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಕೋರ್ಟ್ ತಿಳಿಸಿದೆ.

ಮುಂದೇನು ಮಾಡಲಿದೆ ಬಿಬಿಎಂಪಿ

ನಗರದಲ್ಲಿ ಕಸ ವಿಲೇವಾರಿಯೇ ಬಹು ದೊಡ್ಡ ಸಮಸ್ಯೆಯಾಗಿ ಎದುರಾಗಿದ್ದ ಬಿಬಿಎಂಪಿಗೆ ಹೈಕೋರ್ಟ್ ಆದೇಶದಿಂದ ಹೊಸ ಉತ್ಸಾಹ ಬಂದಂತಾಗಿದೆ. ಈ ಆದೇಶ ಮುಂದಿಟ್ಟುಕೊಂಡು ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಡೆ ಹಾಕಲು ಅವಕಾಶ ಪಡೆದಿದೆ. ಈ ಮೂಲಕ ನಗರದ ನಿವಾಸಿಗಳೇ ಮನೆಯಲ್ಲಿ ಕಸ ವಿಂಗಡಿಸುವಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬಹುದು. ಇಲ್ಲವಾದಲ್ಲಿ ಕಾನೂನು ಅನ್ವಯ ದಂಡ ವಿಧಿಸಬಹುದಾಗಿದೆ.

ಕೋರ್ಟ್ ಆದೇಶ ಪಾಲಿಕೆಗೆ ವರವಾಗಿದೆ. ಈ ಮೂಲಕ ನಗರವನ್ನು ಕಸ ಮುಕ್ತವಾಗಿಸಲು ಪ್ರಯತ್ನ ನಡೆಸುತ್ತೇವೆ. ಕೋರ್ಟ್ ಆದೇಶದಂತೆ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ
ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಬೀದಿ ನಾಟಕದ ಮೂಲಕ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮುಂದೆಯೂ ಅರಿವು ಕಾರ್ಯಕ್ರಮ ನಡೆಯಲಿದೆ. ಎಲ್ಲೆಂದರಲ್ಲಿ ಕಸ ಚೆಲ್ಲುವುದು ಅಥವಾ ಕಸ ವಿಂಗಡಿಸದಿದ್ದರೆ, ರು.500 ರಿಂದ ರು.5,000 ರೂ. ವರೆಗೂ ದಂಡ ವಿಧಿಸುವ ಅವಕಾಶವಿದೆ.

-ಬಿ.ವಿ.ಮಂಜುನಾಥ ರೆಡ್ಡಿ, ಬಿಬಿಎಂಪಿ ಮೇಯರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com