
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದುಷ್ಕರ್ಮಿಗಳು ಗಮನ ಬೇರೆಡೆ ಸೆಳೆದು ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕೆಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಹೇಳಿದರು.
ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಬ್ಯಾಂಕ್‍ಗಳ ವ್ಯವಸ್ಥಾಪಕರು ಮತ್ತು ಸೆಕ್ಯುರಿಟಿ ಏಜೆನ್ಸಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‍ಗಳು, ಹಣಕಾಸು ಸಂಸ್ಥೆಗಳಲ್ಲಿ ನಡೆಯುವ ದರೋಡೆ ಪ್ರಕರಣಗಳಲ್ಲಿ ಕೆಲ ಬ್ಯಾಂಕ್ ಸಿಬ್ಬಂದಿಯೂ ಶಾಮೀಲಾಗುತ್ತಿದ್ದಾರೆ. ಆದ್ದರಿಂದ ಸಿಬ್ಬಂದಿಗಳ ನೇಮಕ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕೆಂದು ಅವರು ತಿಳಿಸಿದರು.
ನಗರದ ಆಗ್ನೇಯ ವಿಭಾಗದ ಬಹಳಷ್ಟು ಬ್ಯಾಂಕ್‍ಗಳು ಇಂದಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿಲ್ಲ. ಕೂಡಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಬ್ಯಾಂಕ್ ಆವರಣ ದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ಅಂತಹ ವ್ಯಕ್ತಿಗಳ ಬಗ್ಗೆ ಸದಾ ಕಾಲ ನಿಗಾವಹಿಸಬೇಕೆಂದು ಸಲಹೆ ನೀಡಿದರು.
ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಮಾತನಾಡಿ, ಜನ ನಂಬಿಕೆಯಿಂದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ತಮ್ಮ ಹಣ ಇಡಲು ಮುಂದೆ ಬರುತ್ತಿದ್ದಾರೆ. ಸಂಸ್ಥೆಗಳು ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು. ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಎಟಿಎಂ ಕೇಂದ್ರಗಳಲ್ಲಿ ವೃದ್ಧ ಭದ್ರತಾ ಸಿಬ್ಬಂದಿ ನೇಮಿಸಬಾರದು ರಾತ್ರಿ ಪಾಳಿಯಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಮುಖ್ಯವಾಗಿ ಭದ್ರತಾ ಸಿಬ್ಬಂದಿ ನೇಮಕಾತಿ ವೇಳೆ ಅವರ ಹಿಂದಿನ ಕಾರ್ಯ ವೈಖರಿ ಪರಿಶೀಲಿಸಬೇಕೆಂದು ಅವರು ತಿಳಿಸಿದರು.
Advertisement