ಬೆಂಗಳೂರು: `ನಮ್ಮ ಮೆಟ್ರೋ'ಗೆ ದಿವಂಗತ ಚಿತ್ರನಟ ಶಂಕರ್‍ನಾಗ್ ಹೆಸರಿಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಆಟೋರಾಜ ಶಂಕರ್ ನಾಗ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಸೋಮವಾರ ಪುರಭವನದ ಎದುರು ಪ್ರತಿಭಟನೆ ನಡೆಯಿತು.
ಎಂಬತ್ತರ ದಶಕದಲ್ಲಿ ಶಂಕರ್‍ನಾಗ್ ವಿಶ್ವ ಪರ್ಯಟನೆ ಮಾಡಿ ಅಲ್ಲಿನ ಮೆಟ್ರೋ ಯೋಜನೆ ಬಗ್ಗೆ ಅಧ್ಯಯನ ಮಾಡಿದ್ದರು. ಬಳಿಕ ಬೆಂಗಳೂರಿಗೂ ಮೆಟ್ರೋ ತರಬೇಕೆಂಬ ಮಹಾದಾಸೆಯಿಂದ ಸ್ವಂತ ಖರ್ಚಿನಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜೊತೆಗೆ ಮೆಟ್ರೋ ಸಾಧಕಗಳ ಬಗ್ಗೆ ಚರ್ಚಿಸಿದ್ದರು. ಅಂದು ಶಂಕರ್‍ನಾಗ್ ನೆಟ್ಟ ಮೆಟ್ರೋ ಸಸಿ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಆದ್ದರಿಂದ ಸರ್ಕಾರ ಈಗಿನ ನಮ್ಮ ಮೆಟ್ರೋಗೆ ಶಂಕರ್ ಮೆಟ್ರೋಎಂದು ನಾಮಕರಣ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೂಲತಃ ಶಂಕರ್‍ನಾಗ್ ಚಿತ್ರ ನಟರಾಗಿದ್ದರೂ ಸಾಮಾಜಿಕ ಕಳಕಳಿ ಹೊಂದಿದ್ದರು. ಬೆಂಗಳೂರಿನ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಅವರು, ಕನ್ನಡ ಚಿತ್ರರಂಗದ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದರು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಗಳೂರಿನ ನಮ್ಮ ಮೆಟ್ರೋಗೆ ಶಂಕರ್‍ನಾಗ್ ಮೆಟ್ರೋ ಎಂದು ನಾಮಕರಣ ಮಾಡಬೇಕು ಎಂದರು.
Advertisement