ಸ್ವರ್ಗ ಸೇರುತ್ತೇನೆಂದು ಬಾವಿಗೆ ಹಾರಿದ ಮಹಿಳೆ

`ಇವತ್ತು ವೈಕುಂಠ ಏಕಾದಶಿ. ಸತ್ತರೆ ಸ್ವರ್ಗದಲ್ಲಿರುವ ಅಕ್ಕ ಮತ್ತು ಅಮ್ಮನ ಬಳಿ ಹೋಗಬಹುದಂತೆ. ನಾನೂ ಹೋಗ್ತಾ ಇದ್ದೀನಿ. ಅಣ್ಣನಿಗೆ ಹುಡುಕ ಬೇಡ ಎಂದು ಹೇಳಿ ಬಿಡು' ಎಂದು ಆಕೆ ಕರೆ ಸ್ಥಗಿತಗೊಳಿಸಿದ್ದಳು. ಇದಾದ ಅರ್ಧ ಗಂಟೆಗೆ ಆಕೆ ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದಳು....
ಸ್ವರ್ಗ ಸೇರುತ್ತೇನೆಂದು ಬಾವಿಗೆ ಹಾರಿದ ಮಹಿಳೆ
ಸ್ವರ್ಗ ಸೇರುತ್ತೇನೆಂದು ಬಾವಿಗೆ ಹಾರಿದ ಮಹಿಳೆ

ಬೆಂಗಳೂರು: `ಇವತ್ತು ವೈಕುಂಠ ಏಕಾದಶಿ. ಸತ್ತರೆ ಸ್ವರ್ಗದಲ್ಲಿರುವ ಅಕ್ಕ ಮತ್ತು ಅಮ್ಮನ ಬಳಿ ಹೋಗಬಹುದಂತೆ. ನಾನೂ ಹೋಗ್ತಾ ಇದ್ದೀನಿ. ಅಣ್ಣನಿಗೆ ಹುಡುಕ ಬೇಡ ಎಂದು ಹೇಳಿ ಬಿಡು' ಎಂದು ಆಕೆ ಕರೆ ಸ್ಥಗಿತಗೊಳಿಸಿದ್ದಳು. ಇದಾದ ಅರ್ಧ ಗಂಟೆಗೆ ಆಕೆ ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದಳು.

ಹೌದು, ಸೋಮವಾರ (ಡಿ.21)ಬಸವನಗುಡಿಯ ಉತ್ತರಾದಿ ಮಠದ ಆವರಣದಲ್ಲಿರುವ ತೆರೆದ ಬಾವಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಇದರಿಂದಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೆ ಬೆಳಗಾಗುವ ವೇಳೆಗೆ ಆ ಅನುಮಾನಗಳಿಗೆ ಉತ್ತರ ಹಾಗೂ ಸೂಕ್ತ ಸ್ಪಷ್ಟನೆ ದೊರೆತಿದೆ. ಸ್ವರ್ಗದಲ್ಲಿರುವ ಅಮ್ಮ ಮತ್ತು ಅಕ್ಕನನ್ನು ಅರಸಿ ಬಾವಿಗೆ ಹಾರಿದ್ದ ಆ ಮಹಿಳೆ ಮಂಡ್ಯದ ಸ್ವರ್ಣಸಂದ್ರ ನಿವಾಸಿ ಸೀತಾಲಕ್ಷ್ಮೀ (45). ಬಾಲ್ಯದಲ್ಲಿ ಅಪ್ಪ, ಅಮ್ಮನನ್ನು ಕಳೆದುಕೊಂಡು ಯೌವನದಲ್ಲಿ ಗಂಡನಿಂದ ಬೇರ್ಪಟ್ಟಿದ್ದರು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಅಕ್ಕ ಕೂಡ ಕಳೆದ ಎರಡು ವರ್ಷದ ಹಿಂದೆ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದರು. ಅಪ್ಪ, ಅಮ್ಮ, ಗಂಡ, ಅಕ್ಕ ಹೀಗೆ ತನ್ನ ಪ್ರೀತಿಪಾತ್ರರಾದವರು ಕಾಲಾಂತರದಲ್ಲಿ ದೂರವಾಗಿ ಈಕೆ ಏಕಾಂಗಿ ಆಗಿದ್ದರು.

ಮಂಡ್ಯದ ಸ್ವರ್ಣಸಂದ್ರದಲ್ಲಿರುವ ಅವಿವಾಹಿತ ಅಣ್ಣನೊಂದಿಗೆ ಉಳಿದಿದ್ದ ಸೀತಾಲಕ್ಷ್ಮೀ, ಒಂದು ರೀತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಖಾಸಗಿ ಕಂಪನಿಯೊಂದರಲ್ಲಿ
ಉದ್ಯೋಗಿಯಾಗಿರುವ ಅಣ್ಣ ವಿಶ್ವನಾಥ್, ತಂಗಿಯನ್ನು ಚೆನ್ನಾಗಿಯೇ ಆರೈಕೆ ಮಾಡುತ್ತಿದ್ದರು. ಅಣ್ಣ ರು.1 ಸಾವಿರ ಕೊಟ್ಟಿದ್ದರು: ಸೋಮವಾರ ಬೆಳಗ್ಗೆ ಅಣ್ಣ ಕೆಲಸಕ್ಕೆ ಹೋಗುವ ಮುನ್ನ
ವೈದ್ಯಕೀಯ ಪರೀಕ್ಷೆ ಹಾಗೂ ಔಷಧಗಳ ಖರ್ಚಿಗೆ ಇರಲಿ ಎಂದು ಸೀತಾಲಕ್ಷ್ಮೀಗೆ ರು.1 ಸಾವಿರ ನೀಡಿದ್ದರು. ಸರಿ, ಅಣ್ಣ ಮನೆಯಿಂದ ತೆರಳುತ್ತಿದ್ದಂತೆ ಈಕೆ ತನ್ನ ಬಳಿಯಿದ್ದ ಸಾವಿರದಲ್ಲಿ ಕೇವಲ ರು.200 ತೆಗೆದುಕೊಂಡು ಉಟ್ಟ ಬಟ್ಟೆಯಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಬಳಿಕ ತನಗೆ ಚಿರಪರಿಚಿತವಿರುವ ಬಸವನಗುಡಿ ಉತ್ತರಾದಿ ಮಠದತ್ತ ಬಂದಿದ್ದಾರೆ. ಆಗ ಸಮಯ ಮಧ್ಯಾಹ್ನ ಸುಮಾರು 3 ಗಂಟೆ. ನಂತರ ಸೀತಾಲಕ್ಷಿ ್ಮೀ ಮಠದ ಸಮೀಪವಿರುವ ವಾಣಿವಿಲಾಸ ರಸ್ತೆಗೆ ಹೋಗಿ ಅಲ್ಲಿನ ಅಂಗಡಿವೊಂದರ ಕಾಯಿನ್ ಬಾಕ್ಸ್ ಫೋನ್‍ನಲ್ಲಿ ತನ್ನ ಸಂಬಂಧಿಗೆ ಕರೆ ಮಾಡಿದ್ದಾರೆ. `ಇವತ್ತು ವೈಕುಂಠ ಏಕಾದಶಿ. ಸತ್ತರೆ ಸ್ವರ್ಗದಲ್ಲಿರುವ ಅಕ್ಕ ಮತ್ತು ಅಮ್ಮನ ಬಳಿ ಹೋಗಬಹುದಂತೆ. ನಾನು ಹೊರಡುತ್ತಿದ್ದೀನಿ. ಅಣ್ಣನಿಗೆ ಹುಡುಕ ಬೇಡ ಎಂದು ಹೇಳಿ ಬಿಡು' ಎಂದು ಕರೆ ಸ್ಥಗಿತಗೊಳಿಸಿದ್ದಾರೆ. ಬಳಿಕ ಮಧ್ಯಾಹ್ನ 3.15ರ ಸುಮಾರಿನಲ್ಲಿ ಮಠದ ಆವರಣ ಪ್ರವೇಶಿಸಿರುವ ಸೀತಾಲಕ್ಷ್ಮೀ, ನೇರ ತೆರೆದ ಬಾವಿ ಕಡೆಗೆ ತೆರಳಿದ್ದಾರೆ. ಆದರೆ, ಅಲ್ಲಿ ಒಂದಿಬ್ಬರು ಓಡಾಡುತ್ತಿದ್ದರಿಂದ ಬಾವಿಯ ಅಕ್ಕಪಕ್ಕದಲ್ಲೇ ಸುಳಿದಾಡಿ, ಯಾರೂ ಆ ಕಡೆ ಕಾಣಿಸದ ಸಮಯ ನೋಡಿ ಏಕಾಏಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಂಜೆ 4.30ರ ಸುಮಾರಿನಲ್ಲಿ ಮಠದ ಸಿಬ್ಬಂದಿಯೊಬ್ಬರು ನೀರು ಸೇದಲು ಬಾವಿಗೆ ಸಮೀಪ ಬಂದಾಗ ನೀರಿನ ಮೇಲೆ ಅಪರಿಚಿತ ಮಹಿಳೆ ಶವ ತೇಲುತ್ತಿರುವುದು ಕಂಡು ಬಂದಿದೆ. ಬಳಿಕ ಶಂಕರಪುರಂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಶವ ಮೇಲಕ್ಕೆತ್ತಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಮಹಿಳೆ ಪತ್ತೆಗೆ ಮುಂದಾಗಿದ್ದರು. ಸಿಸಿಟಿವಿ ದೃಶ್ಯಾವಳಿಯಿಂದ ಪತ್ತೆ: ಅಪರಿಚಿತ ಮಹಿಳೆ ಬಾವಿ ಸುತ್ತಮುತ್ತ ಸುಳಿದಾಡಿರುವುದು, ಬಳಿಕ ಏಕಾಏಕಿ ಬಾವಿಗೆ ಹಾರಿರುವುದು ಮಠದ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನು ಸೀತಾಲಕ್ಷ್ಮೀ ಬಾವಿಗೆ ಹಾರುವ ಮುನ್ನ ಸಂಬಂಧಿಗೆ ಕರೆ ಮಾಡಿ ಬಳಿಕ ಸ್ಥಗಿತಗೊಳಿಸಿದ್ದರಿಂದ ಸಂಬಂಧಿ ಗಾಬರಿಗೊಂಡು ಈಕೆಯ ಸಹೋದರನೊಂದಿಗೆ ರಾತ್ರಿ 10 ಗಂಟೆ ವೇಳೆಗೆ ಮಠಕ್ಕೆ ಬಂದಾಗ ಮಹಿಳೆ ಬಗ್ಗೆ ಗೊತ್ತಾಯಿತು. ಈಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುದು ಇದೇ ವೇಳೆ ತಿಳಿಯಿತು. ಹೀಗಾಗಿ ಈಕೆಯದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೀತಾಲಕ್ಷ್ಮಿ ಬಾವಿಗೆ ಹಾರುವ ಮುನ್ನ ವಿಷ ಸೇವಿಸಿದ್ದರೇ ಎಂಬ ಅನುಮಾನಗಳು ತನಿಖೆ ನಿರತ ಪೊಲೀಸರಲ್ಲಿ ಕಾಡುತ್ತಿದೆ. ಆಕೆ ಮಠದೊಳಗೆ ಪ್ರವೇಶಿಸುವಾಗ ಕೈಯಲ್ಲಿ ಬಾಟಲ್ ಇರುವುದು ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com