ಆರಂಭದಲ್ಲೇ ಕ್ಯಾನ್ಸರ್ ಪತ್ತೆಗೆ ವ್ಯವಸ್ಥೆ ಅಗತ್ಯ: ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಭಾರತ ಸೇರಿ ಅಭಿವೃದ್ಧಿ ಶೀಲ ದೇಶಗಳಲ್ಲಿ ಕ್ಯಾನ್ಸರ್ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ...
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ಬೆಂಗಳೂರು: ಭಾರತ ಸೇರಿ ಅಭಿವೃದ್ಧಿ ಶೀಲ ದೇಶಗಳಲ್ಲಿ ಕ್ಯಾನ್ಸರ್ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ವೈಜ್ಞಾನಿಕ ವ್ಯವಸ್ಥೆ ರೂಪಿಸಬೇಕಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ರಾಜ್ಯ ಕ್ಯಾನ್ಸರ್ ಸಂಸ್ಥೆಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿದ ಅವರು ಬುಧವಾರ ಈ ವಿಷಯ ತಿಳಿಸಿದ್ದು, ವಿಶ್ವಾದ್ಯಂತ ಕ್ಯಾನ್ಸರ್  ಪ್ರಮಾಣ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಐಸಿಎಂಆರ್ ಸಂಸ್ಥೆಯ ರಾಷ್ಟ್ರೀಯ ಕ್ಯಾನ್ಸರ್ ರಜಿಸ್ಟ್ರಿ ಪ್ರೋಗ್ರಾಮ್ ಪ್ರಕಾರ ನಗರ ಪ್ರದೇಶಗಳಲ್ಲಿ ಪ್ರತಿ ಹದಿನೈದು ಪುರುಷರಲ್ಲಿ ಒಬ್ಬರಿಗೆ, ಪ್ರತಿ 12 ಮಹಿಳೆಯರ ಪೈಕಿ ಒಬ್ಬರಿಗೆ ಕ್ಯಾನ್ಸರ್ ರೋಗಸಾಧ್ಯತೆ ಶಂಕಿಸಲಾಗಿದೆ. ಜೀವಿತಾವಧಿಯಲ್ಲಿ ಇದು ಕ್ಯಾನ್ಸರ್ ಕಾಯಿಲೆಯಾಗಿ ಪರಿವರ್ತಿತವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆದರೆ ಭಾರತದಲ್ಲಿ ಕ್ಯಾನ್ಸರ್ ಅಂತಿಮ ಹಂತಕ್ಕೆ ಹೋದ ಸಂದರ್ಭದಲ್ಲೇ ಹೆಚ್ಚಿನ ಸಂದರ್ಭದಲ್ಲಿ ಪತ್ತೆಯಾಗುತ್ತಿದೆ. ಇದರಿಂದ ಪರಿಣಾಮಕಾರಿ ಚಿಕಿತ್ಸೆ ದುರ್ಲಬವಾಗುತ್ತದೆ. ದೇಶದ ಹೆಚ್ಚಿನ ಜನರು ಗ್ರಾಮಾಂತರ ಪ್ರದೇಶಗಳಲ್ಲೇ ವಾಸ ಮಾಡುತ್ತಾರೆ, ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದ್ದು, ಈ ದಿಶೆಯಲ್ಲಿ ಹೆಚ್ಚಿನ ಸಂಶೋಧನೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯ ಪಡೆಯುವುದು ಭಾರತದಲ್ಲಿ ಇನ್ನೂ ಕಷ್ಟ ಸಾಧ್ಯ ವಿಷಯವಾಗಿದೆ. ಅದರಲ್ಲೂ ಕ್ಯಾನ್ಸರ್‍ನಂಥ ಕಾಯಿಲೆಗೆ ಚಿಕಿತ್ಸೆ ಪಡೆಯುವುದಕ್ಕೆ ಹೆಚ್ಚಿನ ಹಣಬೇ ಕಾಗುತ್ತದೆ.ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಯೋಜನೆಯ ವರದಿ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಹಲವು ಸಲಹೆಗಳನ್ನು ನೀಡಿದೆ. ವೈದ್ಯ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವ ಮೂಲಕ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ವೈದ್ಯಕೀಯ ಸಹಾಯ ವಿಸ್ತರಿಸುವುದು, ಪ್ರಾಂತೀಯ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ರಾಜ್ಯ ಮಟ್ಟದ ಕ್ಯಾನ್ಸರ್ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ.

ಕಿದ್ವಾಯಿ ಸ್ಮಾರಕ ಗಂಥಿ ಚಿಕಿತ್ಸಾ ಕೇಂದ್ರಕ್ಕೆ ಈ ಸೌಲಭ್ಯ ಲಭಿಸಿದೆ. ಕಳೆದ ನಾಲ್ಕು ದಶಕಗಳಿಂದ ಕ್ಯಾನ್ಸರ್ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನಿಡುತ್ತಿರುವ ಕಿದ್ವಾಯಿ ಸಂಸ್ಥೆಯ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಮಾತನಾಡಿ, ಸುವರ್ಣ ಆರೋಗ್ಯ, ಯಶಸ್ವಿನಿ, ಜ್ಯೋತಿ ಸಂಜೀವಿನಿ ಸೇರಿದಂತೆ ಹಲವು ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. ರಾಜ್ಯ ಕ್ಯಾನ್ಸರ್ ಸಂಶೋಧನಾ ಕೇಂದ್ರ ತೆರೆಯುವುದಕ್ಕೆ ಕೇಂದ್ರ ಸರ್ಕಾರದ ಅನುದಾನದ ಜತೆಗೆ ರು.30 ಕೋಟಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಂಪನ್ಮೂಲ ಕ್ರೋಢೀಕರಣಕ್ಕೆ ವಿಶೇಷ ಕಾಳಜಿ ನೀಡುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com