ಚರ್ಚ್ ಸ್ಟ್ರೀಟ್ ಸ್ಪೋಟ: ಆರೋಪಿಗಳ ಸುಳಿವಿಲ್ಲ

ಕಳೆದ 2014ರ ಡಿಸೆಂಬರ್ 28ರಂದು ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟಿಸಿ ವರ್ಷ ಕಳೆದರೂ ಆರೋಪಿಗಳು...
ಕಳೆದ ವರ್ಷ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟಗೊಂಡ ನಂತರದ ಪರಿಸ್ಥಿತಿಯ ಚಿತ್ರ.
ಕಳೆದ ವರ್ಷ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟಗೊಂಡ ನಂತರದ ಪರಿಸ್ಥಿತಿಯ ಚಿತ್ರ.

ಬೆಂಗಳೂರು: ಕಳೆದ 2014ರ ಡಿಸೆಂಬರ್ 28ರಂದು ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟಿಸಿ ವರ್ಷ ಕಳೆದರೂ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಬೆಂಗಳೂರು ಪೊಲೀಸರಿಂದ ರಾಷ್ಟ್ರೀಯ ತನಿಖಾ ತಂಡ(ಎನ್ ಐಎ)ಕ್ಕೆ ವರ್ಗಾವಣೆಯಾದ ಈ ಪ್ರಕರಣ ಕಬ್ಬಿಣದ ಕಡಲೆಯಾಗಿದೆ.

ಚರ್ಚ್ ಸ್ಟ್ರೀಟ್ ಪ್ರಕರಣದ ಆರೋಪಿಗಳ ಪತ್ತೆಗೆ ಪೂರಕ ಸಾಕ್ಷ್ಯಗಳೇ ಇಲ್ಲವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರು, ಮೊದಲಿಗೆ ಇದು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಉಗ್ರ ಸಂಘಟನೆ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ನಂತರ ಅಲ್ ಉಮ್ಮಾ ಉಗ್ರ ಸಂಘಟನೆಯ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು. ಮತ್ತೊಂದೆಡೆ ಬಿಹಾರ ಜೈಲಿನಲ್ಲಿದ್ದ ಇಬ್ಬರು ಸಿಮಿ ಉಗ್ರರನ್ನು ಬೆಂಗಳೂರಿಗೆ ಕರೆತಂದು ವಿಚಾರಣೆಯನ್ನೂ ನಡೆಸಲಾಯಿತು. ಆಗಲೂ ಆರೋಪಿಗಳು ಇವರೇ ಎಂದು ಸುಳಿವು ಸಿಗಲಿಲ್ಲ.

ನಂತರ ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂಭಾಗದ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಅಲ್ ಉಮ್ಮಾ ಉಗ್ರ ಸಂಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅದನ್ನು ಪರಿಶೀಲಿಸಲು ಬೆಂಗಳೂರು ಪೊಲೀಸರು ತಮಿಳುನಾಡಿಗೂ ತೆರಳಿದ್ದರು. ಈ ಪ್ರಯತ್ನವೂ ಬೆಂಗಳೂರು ಪೊಲೀಸರಿಗೆ ಫಲಿಸಲಿಲ್ಲ. ಹೀಗಾಗಿ ಘಟನೆ ನಡೆದು ವರ್ಷ ಮುಗಿಯುತ್ತಾ ಬಂದರೂ ಆರೋಪಿಗಳ ಸುಳಿವಿಲ್ಲ.

ಇನ್ನು ತನಿಖೆ ಕೈಗೊಂಡ ಎನ್ ಐಎ, ಪ್ರಕರಣದ ಸಾಕ್ಷ್ಯಗಳಿಗಾಗಿ ಬೆಂಗಳೂರಿಗೆ ಆಗಮಿಸಿ, ಎಲ್ಲವನ್ನೂ ಶೋಧಿಸಲು ನಿರತವಾಗಿತ್ತು. ಆದರೆ, ಬೆಂಗಳೂರು ಪೊಲೀಸರ ತನಿಖಾ ತಂಡಕ್ಕೆ ನೀಡಿದ ಮಾಹಿತಿಯಿಂದ ತನಿಖೆ ಕಷ್ಟವಾಗಲಿದೆ ಎಂಬುದು ಎನ್ ಐಎ ಅಧಿಕಾರಿಗಳ ಅರಿವಿಗೆ ಬಂತು. ಹೀಗಾಗಿ ಸ್ಪೋಟದ ರೂವಾರಿಗಳು ಒಂದು ಸಣ್ಣ ಸುಳಿವು ಬಿಡದೆ ಕೆಲಸ ಮುಗಿಸಿದ್ದರು. ಸ್ಪೋಟ ನಡೆದ ಸ್ಥಳದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಗಳು ಕೂಡ ತನಿಖೆಗೆ ಸಾಕ್ಷ್ಯ ಒದಗಿಸಲಿಲ್ಲ.

ಸ್ಪೋಟ ಸಂಭವಿಸಿದಾಗ ರಾಜ್ಯ ಸರ್ಕಾರವು ಆಂಧ್ರದ ಮಾದರಿಯಲ್ಲಿ ಸಾರ್ವಜನಿಕರ ರಕ್ಷಣೆ ಕಾನೂನು ತರುತ್ತೇವೆ. 100 ಜನ ಅಥವಾ ಅದಕ್ಕೂ ಅಧಿಕ ಜನ ಸೇರುವ ಸ್ಥಳಗಳ ಕಟ್ಟಡ ಅಥವಾ ಹೊಟೇಲ್ ಮಾಲೀಕರಿಗೆ ಸಿಸಿ ಟಿವಿ ಅಳವಡಿಸಿ ಮೆಟಲ್ ಡಿಟೆಕ್ಟರ್ ಅಳವಡಿಕೆಗೆ ಸೂಚಿಸುತ್ತೇವೆ ಎಂದಿದ್ದರು. ಆದರೆ, ಇದ್ಯಾವುದೂ ಈಡೇರಿಲ್ಲ.

ಘಟನೆಯ ಹಿನ್ನೋಟ: ಡಿಸೆಂಬರ್ 28ರ ರಾತ್ರಿ ಸುಮಾರು 10 ಗಂಟೆಗೆ ಚರ್ಚ್ ಸ್ಟ್ರೀಟ್ ನ ಕೋಕೋನೆಟ್ ಗ್ರೋವ್ ರೆಸ್ಟೋರೆಂಟ್ ಕಾಂಪೌಂಡ್ ಫುಟ್ ಪಾತ್ ಕೆಳಗೆ ಇಟ್ಟಿದ್ದ ಬಾಂಬ್ ಸ್ಪೋಟಗೊಂಡಿತ್ತು. ಈ ವೇಳೆ ತಮಿಳುನಾಡು ಮೂಲದ ಮಹಿಳೆ ಸಾವನ್ನಪ್ಪಿದ್ದರು. ಪೊಲೀಸರು ಬ್ಯಾರಿಕೇಡ್ ನಿರ್ಮಿಸಿದರು. ಕೂಡಲೇ ಬಾಂಬ್ ನಿಷ್ಕ್ರಿಯ ದಳ, ಫಾರೆನ್ಸಿಕ್ ತಜ್ಞರನ್ನು ಕರೆಯಿಸಿ ಸ್ಥಳ ಪರೀಕ್ಷೆ ನಡೆಸಿ, ಅಗತ್ಯ ಸಾಕ್ಷ್ಯ ಸಂಗ್ರಹಿಸಿದ್ದರು. ಆದರೆ, ಹೊಟೇಲ್ ಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಹೊಟೇಲ್ ನ ಆವರಣಕ್ಕೆ ಸೀಮಿತವಾಗಿದ್ದವೇ ಹೊರತು, ರಸ್ತೆ ಕಡೆ ಮುಖ ಮಾಡಿರಲಿಲ್ಲ. ಅಲ್ಲದೇ ಈ ವೇಳೆಯಲ್ಲಿ ಕ್ಯಾಮೆರಾಗಳು ಹಾಳಾಗಿದ್ದವು. ಇದು ಪೊಲೀಸರಿಗೆ ತಲೆನೋವು ತಂದಿತ್ತು. ಅದು ಕೂಡ ತನಿಖೆಗೆ ಅಡ್ಡಿಯುಂಟು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com