
ಬೆಂಗಳೂರು: ಜನರಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಜನರ ಕೆಲಸ ಮಾಡುವ ಬದಲು ಕಲಾಪದ ವೇಳೆ ಕೂಗಾಡಿ, ಸಭಾತ್ಯಾಗ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ವರ್ತನೆ ತೋರುವ ಸಂಸದರ ಸಂಬಳ ಹೆಚ್ಚು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಮೂಲಕ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಅವರು ಸಂಸದರ ಸಂಬಳ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ತುಳುವೆರೆಂಕುಲು ಬೆಂಗಳೂರು ಸಂಸ್ಥೆಯು ಕಸಾಪ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 2015ರ ಬಲಿಯೇಂದ್ರ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕಾಗಿ ಸಂಬಳ ಹೆಚ್ಚು ಮಾಡಬೇಕು? ಸಂಸದರು ಎಂದು ಜನರ ಸಮಸ್ಯೆಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿರುತ್ತಾರೋ ಅಲ್ಲಿಯವರೆಗೆ ಅವರ ಸಂಬಳ ಹೆಚ್ಚು ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಜನರ ಹಣದಿಂದಲೇ ನಡೆಯುವ ಸಂಸತ್ತಿನ ಅವಧಿ ಶ್ರೇಷ್ಠವಾದದು. ಅಲ್ಲಿ ಜನರ ಸಮಸ್ಯೆಯನ್ನು ಪ್ರಸ್ತಾಪಿಸಿ ಪರಿಹರಿಸಲು ಪ್ರಯತ್ನಿಸಬೇಕಾದ ಸಂಸದರು ವೃತ ಕಾಲವ್ಯಯ ಮಾಡುತ್ತಿದ್ದಾರೆ. ಕಾರಣಗಳಿಲ್ಲದೆ ಕೂಗಾಡಿ, ಸಭಾತ್ಯಾಗ ಮಾಡುತ್ತಾರೆ. ಅವರು ಭಾಗವಹಿಸಿದ್ದಕ್ಕಾಗಿ ಸಿಟ್ಟಿಂಗ್ ಜಾರ್ಜ್ ಪಡೆದುಕೊಳ್ಳುವ ಅವರು ಸಾರ್ವಜನಿಕರ ಶ್ರಮದ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಸಂಬಳ ಹೆಚ್ಚು ಮಾಡುವಂತೆ ಕೇಳುತ್ತಿರುವುದು ತರವಲ್ಲ. ಹಿಂದಿನ ಸಂಸದರ ಬದ್ಧತೆಗೂ, ಈಗಿನ ಸಂಸದರ ಬದ್ಧತೆಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ವಿಶ್ಲೇಷಿಸಿದರು.
ಇದೇ ವೇಳೆ ಸಾಹಿತಿ ಉದಯ ಧರ್ಮಸ್ಥಳ, ಸುವರ್ಣನ್ಯೂಸ್ ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷಿ ್ಮೀ ಶಿಬರೂರು, ಕಲಾವಿದ ವಿಲಾಸ್ ನಾಯಕ್ ಅವರಿಗೆ 2015ನೇ ಸಾಲಿನ ಬಲಿಯೇಂದ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಕ್ಷಣ ತಜ್ಞ ಡಾ.ಕೆ.ಇ. ರಾಧಾಕೃಷ್ಣ, ಪತ್ರಕರ್ತ ಜೋಗಿ, ಕೆ.ಎನ್. ಅಡಿಗ ಅಡೂರು ಇತರರಿದ್ದರು.
Advertisement