
ಬೆಂಗಳೂರು: ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯ್ ಅವರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಕೆಲವು ನೌಕರರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಮಥಾಯï ಅವರ ಕಚೇರಿಯಲ್ಲಿನ ವ್ಯವಸ್ಥಾಪಕರು ಸೇರಿದಂತೆ ಕೆಲವು ಸಿಬ್ಬಂದಿ ಪತ್ರದಲ್ಲಿ ಸಹಿ ಹಾಕಿದ್ದಾರೆ. ವರದಿ ತಯಾರಿಕೆ ಸೇರಿದಂತೆ ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವ ಮಥಾಯ್ ಅವರು ವಿನಾಕಾರಣ ಸಿಬ್ಬಂದಿಯನ್ನು ನಿಂದಿಸುತ್ತಿದ್ದಾರೆ ಎಂಬುದು ಕೇಳಿಬಂದಿರುವ ಪ್ರಮುಖ ಆರೋಪ. ಇದೇ ವೇಳೆ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆನೀಡಿರುವ ಮಥಾಯ್, ತಾವು ಯಾರನ್ನೂ ನಿಂದಿಸಿಲ್ಲ. ಅಂದಿನ ದಿನದ ಕೆಲಸವನ್ನು ಅಂದೆ ಮುಗಿಸುವಂತೆ ಸೂಚಿಸಿದ್ದೇನಷ್ಟೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಜಾಹೀರಾತುದಾರರೊಂದಿಗೆ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಮಥಾಯï ಅನೇಕರನ್ನು ನಿಂದಿಸುತ್ತಿದ್ದು ಇದು ಮಾನಸಿಕವಾಗಿ ನೋವುಂಟು ಮಾಡುತ್ತಿದೆ. ಅವರು ಪದೇ ಪದೇ ನೀಡುವ ವರದಿಯನ್ನು ಸಿಬ್ಬಂದಿ ಕೈಯಿಂದಲೇ ಸಿದ್ಧಪಡಿಸಿ ನಂತರ ಅದೇ ಸಿಬ್ಬಂದಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ವ್ಯವಸ್ಥಾಪಕಿ ಬಿ. ಲಕ್ಷ್ಮೀ, ಕಂದಾಯ ಪರಿವೀಕ್ಷಕ ಎ.ಅಮೃತ್ ರಾಜ್, ಪ್ರಥಮ ದರ್ಜೆ ಸಹಾಯಕ ಹೇಮಂತ್ ಕುಮಾರ್ ಸೇರಿ ಹಲವರು ಪತ್ರದಲ್ಲಿ ಸಹಿ
ಹಾಕಿದ್ದಾರೆ. ಇನ್ನು ಹೇಮಂತ್ ಕುಮಾರ್ ಕಡತಗಳನ್ನು ನೀಡದ ಬಗ್ಗೆ ಈ ಹಿಂದೆ ಮಥಾಯ್ ಅವರು ಆಯುಕ್ತರಿಗೆ ದೂರು ನೀಡಿದರಲ್ಲದೇ ಮಾಧ್ಯಮಗಳಲ್ಲಿಯೂ ಈ ವಿಚಾರ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪಾಲಿಕೆ ನೌಕರರ ಸಂಘ ಖಂಡಿಸಿದೆ.
Advertisement