(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಆಂದೋಲನದಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯ

ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಆಂದೋಲನಗಳು ನಡೆದಾಗ ಮಾತ್ರ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಹೇಳಿದರು...
Published on

ಬೆಂಗಳೂರು: ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಆಂದೋಲನಗಳು ನಡೆದಾಗ ಮಾತ್ರ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಹೇಳಿದರು.

ಭಾರತೀಯ ಮಹಿಳಾ ಒಕ್ಕೂಟ ರಾಜ್ಯ ಮಂಡಳಿಯು ಶಾಸಕರ ಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಸಂಘಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಅಡುಗೆ ಮನೆಯಿಂದ ಹೊರಬಂದು ಆರ್ಥಿಕವಾಗಿ ಸುಧಾರಿಸಬೇಕು. ಪುರುಷ ಸಮಾಜದ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ತಮ್ಮ ಪಾತ್ರವನ್ನು ಗುರುತಿಸಿಕೊಳ್ಳಬೇಕು. ಇದಕ್ಕಾಗಿ ಆಂದೋಲನಗಳು ನಡೆಯಬೇಕು ಎಂದು ಹೇಳಿದರು.

ಒಬ್ಬ ಮಗ ಅತ್ಯಾಚಾರಿಯಾದಾಗ ಅವನಿಗೆ ಶಿಕ್ಷೆಯಾಗಬೇಕು ಎಂದು ತಾಯಿಯೊಬ್ಬಳು ಆಲೋಚಿಸಿದಾಗ ಮಹಿಳಾ ಪ್ರಜ್ಞೆ ಹುಟ್ಟುತ್ತದೆ. ಆಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ. ಗಲ್ಲು ಶಿಕ್ಷ ಗೊತ್ತಿದ್ದರೂ ಅತ್ಯಾಚಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಷ್ಟಪಡುತ್ತಾರೆ. ಆದರೆ ತಪ್ಪಿನ ಅರಿವಿಲ್ಲದೆ ಅತ್ಯಾಚಾರಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಮಹಿಳೆಯರು ಮನೆ ಮತ್ತು ಸಮಾಜದಲ್ಲಿ ಗಂಡಸರನ್ನೂ ಎದುರಿಸುವ ಹಾಗೂ ಸುಧಾರಿಸುವ ಪ್ರವೃತ್ತಿ ಬೆಳೆಸಿಕೊಳ್ಳ ಬೇಕು ಎಂದರು.

ಮಹಿಳೆಗೆ ಹೊರಗಡೆ ದುಡಿಯಲು ಪುರುಷ ಸಮ್ಮತಿ ನೀಡುತ್ತಿದ್ದಾನೆ ಎಂದರೆ ಆಕೆಗೆ ಸ್ವಾತಂತ್ರ್ಯ ನೀಡಿದ್ದಾನೆ ಎಂದು ಅರ್ಥವಲ್ಲ. ತನ್ನೊಬ್ಬನ ಸಂಪಾದನೆಯಿಂದ ಮನೆ ನಡೆಸಲು ಸಾಧ್ಯವಿಲ್ಲ. ಹೆಂಡತಿಯೂ ದುಡಿದು ತರಲಿ ಎಂಬ ಅಹಂಕಾರದಿಂದ. ಪುರುಷ ಕೇಂದ್ರ ಸಮಾಜದಲ್ಲಿ ಮನೆಗೆಲಸಗಳನ್ನು ನಿರ್ವಹಿಸಿಕೊಂಡು ಗುಲಾಮಳಂತೆ ಇರುವ ಮಹಿಳೆ ಉತ್ತಮ ಗೃಹಿಣಿ ಆಗಬಲ್ಲಳು. ಮನೆಯಿಂದ ಹೊರಬಂದಲ್ಲಿ ಆಕೆ ಉತ್ತಮ ಗೃಹಿಣಿಯಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಬದಲಾಗಬೇಕು ಎಂದು ಸಲಹೆ ನೀಡಿದರು.

ಹಿರಿಯ ವಕೀಲ ಎಂ.ಸಿ.ನರಸಿಂಹನ್ ದಂಪತಿಯನ್ನು ಗೌರವಿಸಲಾಯಿತು. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ವಿಶ್ವನಾಥ್ ನಾಯಕ್, ವಕೀಲ ಸುನಿಲ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಪ್ರಮೋದ ಹಜಾರೆ, ಒಕ್ಕೂಟದ ರಾಜ್ಯಾಧ್ಯಕ್ಷೆ ಜ್ಯೋತಿ, ಪತ್ರಕರ್ತೆ ಭಾರತಿ ಹೆಗಡೆ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com