2015 ಕರ್ನಾಟಕದ ರೈತರಿಗೆ ಕಹಿಯ ವರ್ಷ

ಹೊಸ ವರ್ಷ 2016ಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಹಳೆಯದ್ದನ್ನು ನೋಡುವುದಾದರೆ ನಮ್ಮ ಕರ್ನಾಟಕ ರಾಜ್ಯದ ರೈತರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ವರ್ಷ 2016ಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಹಳೆಯದ್ದನ್ನು ನೋಡುವುದಾದರೆ ನಮ್ಮ ಕರ್ನಾಟಕ ರಾಜ್ಯದ ರೈತರ ಪಾಲಿಗೆ ಕಹಿಯ ವರ್ಷ ಎಂದೇ ಹೇಳಬಹುದು. ಕಳೆದ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 978 ಮಂದಿ ಕರ್ನಾಟಕದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈಯಿಂದ ಅಕ್ಟೋಬರ್ ವರೆಗೆ ಶೇಕಡಾ 80 ಮಂದಿ ರೈತರು ಸಾವನ್ನಪ್ಪಿದ್ದಾರೆ.

1956ರಲ್ಲಿ ಕರ್ನಾಟಕ ರಾಜ್ಯ ರಚನೆಗೊಂಡ ನಂತರ  ಇಷ್ಟೊಂದು ಸಂಖ್ಯೆಯಲ್ಲಿ ರೈತರು ಸಾವನ್ನಪ್ಪಿದ್ದು ಇದೇ ಮೊದಲು. ಸಾವನ್ನಪ್ಪಿದ ರೈತರಲ್ಲಿ 323 ರೈತರ ಸಾವು ಕೃಷಿ ಸಂಬಂಧಿ ಸಮಸ್ಯೆಗಳಿಂದ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಇನ್ನುಳಿದ 277 ಮಂದಿ ಸಾವು ಕೃಷಿಗೆ ಸಂಬಂಧಿಸಿಲ್ಲ ಎಂದು ಹೇಳಿದೆ.

ಮಂಡ್ಯ, ಮೈಸೂರು, ಹಾಸನ ಮತ್ತು ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾವನ್ನಪ್ಪಿದ್ದಾರೆ.ಮಂಡ್ಯ ಜಿಲ್ಲೆಯೊಂದರಲ್ಲೇ 92 ಮಂದಿ, ಬೆಳಗಾವಿಯಲ್ಲಿ 74, ಹಾವೇರಿಯಲ್ಲಿ 73, ಮೈಸೂರು 62, ಹಾಸನದಲ್ಲಿ 58, ರಾಯಚೂರು 56, ಇನ್ನು ಬರಗಾಲಪೀಡಿತ ಜಿಲ್ಲೆಗಳಾದ ವಿಜಯಪುರದಲ್ಲಿ 36, ಕೋಲಾರದಲ್ಲಿ 9, ಬಳ್ಳಾರಿಯಲ್ಲಿ 24 ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ 49 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಸಮಸ್ಯೆಗಳನ್ನು ತಾಳಲಾರದೆ ಸಾವನ್ನಪ್ಪಿರುವ ಕಬ್ಬು ಬೆಳೆಗಾರರ ಸಂಖ್ಯೆ ಅಧಿಕ. ಸಕ್ಕರೆ ಉತ್ಪಾದನೆ ಹೆಚ್ಚಳಗೊಂಡರೂ ಅದರ ಬೆಲೆ ಮಾತ್ರ ಕುಗ್ಗಿತ್ತು. ಇನ್ನು ಅನೇಕ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಹಣ ಪಾವತಿಸಿಲ್ಲ. ರೈತರ ಸಾಲ ದಿನೇ ದಿನೇ ಅಧಿಕವಾಗುತ್ತಿದೆ. ಇನ್ನು ಅನಧಿಕೃತವಾಗಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಕೆಲವು ರೈತರು ದುರಭ್ಯಾಸದಿಂದ ಹಣ ಪೋಲು ಮಾಡಿ, ಸಾಲ ಬೆಳೆದು, ಮಕ್ಕಳ ಮದುವೆ, ವಾಹನ ಇತ್ಯಾದಿಗೆ ಖರ್ಚು ಮಾಡಿ ತೀರಿಸಲಾಗದೆ ಸಾವನ್ನಪ್ಪಿದ್ದಾರೆ.

ಎಲ್ಲಾ ರೈತರು ಕೃಷಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಳ್ಳಲು ರಾಜ್ಯ ಸರ್ಕಾರ ಆರಂಭದಲ್ಲಿ ನಿರಾಕರಿಸಿತ್ತು. ಆದರೆ ಒಂದು ಹಂತದಲ್ಲಿ ರೈತರ ಸಾವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಸಾಲಬಾಧೆಯಿಂದ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ಮೊತ್ತವನ್ನು 2 ಲಕ್ಷದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿತು.

ರೈತರಿಗೆ ಇಂದು ಕೃಷಿ ಉತ್ಪನ್ನಗಳ ವೆಚ್ಚ ಹೆಚ್ಚಾಗುತ್ತಿದೆ. ಕಬ್ಬು ಬೆಳೆಯಲು ರೈತರು ಹಾಕುವ ವೆಚ್ಚಕ್ಕೆ ತಕ್ಕಷ್ಟು ಅವರಿಗೆ ಸಕ್ಕರೆಗೆ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಅವರು ಸಾಲದ ಬಾಧೆಯಿಂದ ಬಳಲುತ್ತಾರೆ ಎನ್ನುತ್ತಾರೆ ಸಂಶೋಧಕ ತಜ್ಞ ಕಿಶೋರ್ ಭಟ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com