
ಬೆಂಗಳೂರು: ಅನುಮತಿ ಇಲ್ಲದೆ ಪ್ರವಾಸ, ವಾಹನ ಖರೀದಿ, ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತಿತರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಕೆಎಂಎಫ್‌ನ ಅಧ್ಯಕ್ಷ ಪಿ.ನಾಗರಾಜ್ ಅವರನ್ನು 2 ವರ್ಷಗಳ ಅವಧಿಗೆ ಅಮಾನತುಗೊಳಿಸಿದೆ.
ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದ ನಾಗರಾಜ್ ಕಳೆದ ಏಪ್ರಿಲ್‌ನಲ್ಲಿ ಕೆಎಂಎಫ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಹಕಾರ ಸಂಘಗಳ ನಿಬಂಧಕರು ವಿಚಾರಣೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ. ನಾಗರಾಜ್ ಅವರ ಅನರ್ಹ ವಿವಾದ ರಾಜ್ಯ ರಾಜಕಾರಣದಲ್ಲಿ ವಿವಾದ ಕಿಡಿ ಹೊತ್ತಿಸಿದೆ. ಕೆಎಂಎಫ್‌ನ ಅಧ್ಯಕ್ಷ ನೇಮಕಾತಿ ಆರಂಭದಲ್ಲೇ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಎಂ.ಪಿ.ರವೀಂದ್ರ ಅವರ ನೇಮಕಕ್ಕೆ ಪ್ರಯತ್ನ ನಡೆಸಿದ್ದರು.
ಎಂ.ಪಿ.ಪ್ರಕಾಶ್ ಅವರ ಪುತ್ರರಾದ ಎಂ.ಪಿ.ರವೀಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ತಮ್ಮ ರಾಜಕೀಯ ಗುರುವಿನ ಋಣ ತೀರಿಸಲು ಎಚ್.ಎಸ್.ಮಹದೇವಪ್ರಸಾದ್ ನಿರ್ಧರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರಭಾವ ಬೀರಿದ ಸ್ವಜಾತೀಯ ನಾಯಕರು ನಾಗರಾಜ್ ಅವರನ್ನು ಹುದ್ದೆಗೆ ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದ್ದರು.
ಇದಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಕೂಡ ಬೆಂಬಲವಾಗಿ ನಿಂತಿದ್ದರು. ಈಗ ನಾಗರಾಜ್ ಅವರ ಅನರ್ಹ ವಿವಾದ ರಾಜಕೀಯ ಅಂಗಳದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ನಡುವಿನ ಶೀತಲ ಸಮರ ಎಂದೇ ಬಿಂಬಿಸಲಾಗುತ್ತಿದೆ. ಆದರೆ ದೆಹಲಿ ಪ್ರವಾಸ ಕೈಗೊಂಡಿದ್ದ ಅಧ್ಯಕ್ಷ ನಾಗರಾಜ್ ಅವರು ಪೂರ್ವಾನುಮತಿ ಪಡೆದಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
Advertisement