ಬೆಂಗಳೂರಿಗೆ ತೊಗಾಡಿಯಾ ಪ್ರವೇಶ ನಿರ್ಬಂಧ ತಡೆಗೆ ಹೈಕೋರ್ಟ್ ನಕಾರ

ಬೆಂಗಳೂರಿಗೆ ಪ್ರವೀಣ್ ತೊಗಾಡಿಯಾ ಪ್ರವೇಶ ನಿರ್ಬಂಧ ತಡೆಗೆ ಹೈಕೋರ್ಟ್ ನಿರಾಕರಿಸಿದ್ದು, ನಿರ್ಬಂಧ ಹೇರುವ...
ಪ್ರವೀಣ್ ತೊಗಾಡಿಯಾ
ಪ್ರವೀಣ್ ತೊಗಾಡಿಯಾ

ಬೆಂಗಳೂರು:  ಬೆಂಗಳೂರಿಗೆ ಪ್ರವೀಣ್ ತೊಗಾಡಿಯಾ ಪ್ರವೇಶ ನಿರ್ಬಂಧ ತಡೆಗೆ ಹೈಕೋಟ್ ನಿರಾಕರಿಸಿದ್ದು, ನಿರ್ಬಂಧ ಹೇರುವ ಅಧಿಕಾರ ಆಯುಕ್ತರಿಗೆ ಇದೆ ಎಂದು ಶುಕ್ರವಾರ ಹೇಳಿದೆ.

ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾಗೆ ಫೆಬ್ರವರಿ 5ರಿಂದ 11ರವರೆಗೆ ಬೆಂಗಳೂರು ಪ್ರವೇಶಿಸದಂತೆ ಪೊಲೀಸ್ ಆಯುಕ್ತರು ನಿರ್ಬಂಧದ ಆದೇಶ ಹೊರಡಿಸಿದ್ದರು. ಆಯುಕ್ತರ ಆದೇಶ ಪ್ರಶ್ನಿಸಿ ಹಾಗೂ ಮಧ್ಯಂತರ ತಡೆ ನೀಡುವಂತೆ ಕೋರಿ ತೊಗಾಡಿಯಾ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ಪೀಠ, ಆಯುಕ್ತರ ಆದೇಶಕ್ಕೆ ತಡೆ ಹಾಕಲು ಸಾಧ್ಯವಿಲ್ಲ. ನಿರ್ಬಂಧ ಹೇರುವ ಅಧಿಕಾರ ಪೊಲೀಸ್ ಆಯುಕ್ತರಿಗೆ ಇದೆ ಎಂದು ಹೇಳಿದೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಹಿಂದೂ ವಿರಾಟ ಸಮಾವೇಶ ಹಾಗೂ ಸುವರ್ಣ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಪ್ರವೀಣ್ ಭಾಯ್ ತೊಗಾಡಿಯಾ ಹಾಜರಾಗಬೇಕಿತ್ತು. ವಿಶ್ವ ಹಿಂದೂ ಪರಿಷತ್‍ನ ಸುವರ್ಣ ಜಯಂತಿ ಆಚರಣೆಗೆ ಭಾಗವಹಿಸಲು ಇಚ್ಛಿಸಿದ್ದ ತೊಗಾಡಿಯಾ ಅವರಿಗೆ ನಗರ ಪ್ರವೇಶಿಸದಂತೆ ಆಯುಕ್ತರು ಆದೇಶ ಹೊರಡಿಸಿದ್ದರು.  

ತೊಗಾಡಿಯಾ ಎಲ್ಲೆಡೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂಥ ಪ್ರಚೋದನ ಕಾರಿ ಹೇಳಿಕೆ ನೀಡುತ್ತಾರೆ. ಆತ ಒಬ್ಬ ಅಪಾಯಕಾರಿ ಮನುಷ್ಯನಾಗಿದ್ದು, ಅವರ ಪೂರ್ವಾಪರ ತಿಳಿದುಕೊಂಡು ಆಯುಕ್ತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾಡುವ ಪ್ರಚೋದನಕಾರಿ ಭಾಷಣದಿಂದ ಶಾಂತಿ ಸೌಹಾರ್ದತೆ ಕದಡುವ ಸಾಧ್ಯತೆಯಿದೆ.

ಇತ್ತೀಚೆಗೆ ಕೊಪ್ಪಳದಲ್ಲಿ ವಿಹಿಂಪ ಆಯೋಜಿಸಿರುವ ಸುವರ್ಣ ಸಂಭ್ರಮ ಕಾರ್ಯಕ್ರದಲ್ಲಿ ಕೋಮು ಗಲಭೆ ನಡೆದಿರುವ ವರದಿ ಆಗಿದ್ದು, ಬೆಂಗಳೂರಿಗೆ ಅವರು ಆಗಮಿಸಿದರೆ ಇದೇ  ಘಟನೆ ಮರುಕಳುಸುವ ಸಾಧ್ಯತೆಗಳಿವೆ ಎಂದು ಸರ್ಕಾರದ ಪರ ವಕೀಲರು ವಾದಿಸಿದರು. ವಾದ ವಿವಾದ ಆಲಿಸಿದ ಏಕಸದಸ್ಯ ಪೀಠ ಇಂದು ಆಯುಕ್ತರ ಆದೇಶಕ್ಕೆ ತಡೆ ಒಡ್ಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com