ಸರ್ಕಾರದ ವಿರುದ್ಧ ಕೆಎಂಎಫ್ ಮಾಜಿ ಅಧ್ಯಕ್ಷ ನಾಗರಾಜ್ ರಿಟ್ ಅರ್ಜಿ

ಕೆಎಂಎಫ್ ಆಡಳಿತ ಮಂಡಳಿ ಸದಸ್ಯತ್ವ ಅನರ್ಹಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಅಧ್ಯಕ್ಷ ನಾಗರಾಜ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ...
ಕೆಎಂಎಫ್ ಮಾಜಿ ಅಧ್ಯಕ್ಷ ನಾಗರಾಜ್ (ಸಂಗ್ರಹ ಚಿತ್ರ)
ಕೆಎಂಎಫ್ ಮಾಜಿ ಅಧ್ಯಕ್ಷ ನಾಗರಾಜ್ (ಸಂಗ್ರಹ ಚಿತ್ರ)

ಬೆಂಗಳೂರು: ಕೆಎಂಎಫ್ ಆಡಳಿತ ಮಂಡಳಿ ಸದಸ್ಯತ್ವ ಅನರ್ಹಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಅಧ್ಯಕ್ಷ ನಾಗರಾಜ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೆಎಂಎಫ್ ಆಡಳಿತ ಮಂಡಳಿ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿದ ಸರ್ಕಾರದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೆಎಂಎಫ್ ಮಾಜಿ ಅಧ್ಯಕ್ಷ ಪಿ ನಾಗರಾಜ್ ಅವರು, ಕರ್ನಾಟಕ ಹೈಕೋರ್ಟ್ ನಲ್ಲಿ ಸರ್ಕಾರದ ಕ್ರಮದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ರಿಟ್ ಅರ್ಜಿಯಲ್ಲಿ ಕೆಎಂಎಫ್ ವ್ಯವಸ್ಥಾಪಕರ ನೇಮಕ ಕುರಿತು ಸರ್ಕಾರ ನೋಟಿಸ್ ನೀಡಿದ್ದು, ಇದಕ್ಕೆ ಉತ್ತರಿಸಲು ಕೇವಲ 2 ದಿನ ಕಾಲಾವಕಾಶ ಮಾತ್ರ ನೀಡಲಾಗಿತ್ತು ಎಂದು ನಾಗರಾಜ್ ಹೇಳಿದ್ದಾರೆ.

ಅಲ್ಲದೇ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದ್ದು, ತಾವು ಯಾವುದೇ ರೀತಿಯ ಅಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ನಾಗರಾಜ್ ಕೋರ್ಟ್ ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ನಾಗರಾಜ್ ಪರ ವಕೀಲರು ಹೈಕೋರ್ಟ್ ನಲ್ಲಿ ಇಂದು ವಾದ ಮಂಡಿಸಿದ್ದು, ನೋಟಿಸ್ ಗೆ ಉತ್ತರಿಸಲು ಸರ್ಕಾರ ನೀಡಿದ ಕಾಲಾವಕಾಶ ತುಂಬಾ ಕಡಿಮೆಯಾಯಿತು. ತಮ್ಮ ಕಕ್ಷೀದಾರರು ಯಾವುದೇ ರೀತಿಯ ಅಕ್ರಮದಲ್ಲಿ ಪಾಲ್ಗೊಂಡಿಲ್ಲ. ನಾಗರಾಜ್ ಅವರು ತಮ್ಮ ಸ್ವಂತ ಖರ್ಚಿನಲ್ಲೇ ಪ್ರವಾಸಕ್ಕೆ ತೆರಳಿದ್ದರು ಎಂದು ತಮ್ಮ ವಾದ ಮಂಡಿಸಿದರು.

ಬಳಿಕ ತಮ್ಮ ವಾದ ಮಂಡಿಸಿದ ಸರ್ಕಾರಿ ಪರ ವಕೀಲರಾದ ರವಿವರ್ಮಕುಮಾರ್ ಅವರು, ನೋಟಿಸ್ ಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಕಾಲಾವಕಾಶ ಕಡಿಮೆಯಾಯಿತು ಎಂದು ತಮಗೂ ಅನ್ನಿಸಿದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇನೆ. ಆದರೆ ನಾಗರಾಜ್ ಅವರನ್ನು ಅನರ್ಹಗೊಳಿಸಲು ಕಾರಣಗಿಳಿವೆ ಎಂದು ಹೇಳಿದರು. ಉಭಯ ವಕೀಲರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್  ಅವರು, ಪ್ರಕರಣದಲ್ಲಿ ಸರ್ಕಾರ ಆತುರದಲ್ಲಿ ನಿರ್ಧಾರ ಕೈಗೊಂಡಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುವಂತೆ ಸರ್ಕಾರಿ ಪರ ವಕೀಲರಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

ಇನ್ನು ಸರ್ಕಾರದ ನೋಟಿಸ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆಎಂಎಫ್ ಮಾಜಿ ಅಧ್ಯಕ್ಷ ನಾಗರಾಜ್ ಅವರು, ಒಂದೇ ದಿನದಲ್ಲಿ ನೋಟಿಸ್ ಗೆ ಉತ್ತರ ನೀಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ 7 ದಿನಗಳ ಕಾಲಾವಕಾಶ ನೀಡಬೇಕು. ಸರ್ಕಾರ ಇಂದು ನೋಟಿಸ್ ನೀಡಿ ನಾಳೆ ವಜಾ ಮಾಡಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೋಟ್ಯಂತರ ರುಪಾಯಿ ಭ್ರಷ್ಟಾಚಾರ ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ನಾನು ಯಾವುದೇ ರೀತಿಯ ಅಕ್ರಮದಲ್ಲಿ ಭಾಗಿಯಾಗಿಲ್ಲ. ಬೇಕಿದ್ದರೆ ದಾಖಲೆಗಳನ್ನು ಮುಂದಿಡುತ್ತೇನೆ. ಯಾರು ಬೇಕಿದ್ದರು ಪರಿಶೀಲಿಸಬಹುದು. ನಾನು ಒಂದು ನಯಾ ಪೈಸೆಯನ್ನು ಕೂಡ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಕೆಎಂಎಫ್ ಮಾಜಿ ಅಧ್ಯಕ್ಷ ನಾಗರಾಜ್ ಅವರು ಅಕ್ರಮವಾಗಿ ಹರ್ಯಾಣ ಮತ್ತು ಪಂಜಾಬ್ ಗೆ ಭೇಟಿ ನೀಡಿದ್ದು, ಇದಕ್ಕಾಗಿ ಕೆಎಂಎಫ್ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಕೆಎಂಎಫ್ ಬೋಕಸಕ್ಕೆ ನಷ್ಟವಾಗಿದ್ದು, ಪ್ರವಾಸಕ್ಕಾಗಿ ಕೆಎಂಎಫ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com