
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯ ಗೊಂಡಿದ್ದಾರೆ. ಹೊಸೂರು ರಸ್ತೆಯ ಎಲಿ ವೇಟೆಡ್ ಫ್ಲೈ ಓವರ್ ಮೇಲೆ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ.
ಶುಕ್ರವಾರ ಮುಂಜಾನೆ ಘಟನೆ ನಡೆದಿದ್ದು, ದೆಹಲಿ ಮೂಲದ ಸಂದೀಪ್ ಟೋಮರ್(32) ಮೃತರು. ಅವರ ಸ್ನೇಹಿತ ಕೋರಮಂಗಲ ನಿವಾಸಿ ವಿಶಾಲ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂದೀಪ್ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ವಾಸಿಸುತ್ತಿದ್ದು, ಟೆಕ್ ಮಹೀಂದ್ರ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ವಿಶಾಲ್ ವಿವಿಪುರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಮುಂಜಾನೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಲೈಟ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿದ್ದಾನೆ. ಶ್ರೀನಿವಾಸ ಶಿವಾನಂದ (28) ಮೃತರು. ಸುನಿಲ್(30) ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾನಮತ್ತನಾಗಿ ವಾಹನ ಚಾಲನೆ ಮಾಡುತ್ತಿದ್ದುದೇ ಘಟನೆಗೆ ಕಾರಣ. ಈ ಇಬ್ಬರೂ ಸ್ನೇಹಿತರು ಬನಶಂಕರಿಯಲ್ಲಿನ ಈಜುಕೊಳದಲ್ಲಿ ಈಜು ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ಕದಿರೇನಹಳ್ಳಿಯಿಂದ ದೇವೇಗೌಡ ಪೆಟ್ರೋಲ್ ಬಂಕ್ ಕಡೆಗೆ ಸಾಗುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಸುನಿಲ್ ಶಿವಮೊಗ್ಗ ಹಾಗೂ ಮೃತ ಶ್ರೀನಿವಾಸ್ ಕಾರವಾರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement