
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಏರ್ ಷೋ ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.
ಫೆ.18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಏರ್ ಷೋ ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಕೇಂದ್ರ ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಆದರೆ ಈ ವೇಳೆ ನರೇಂದ್ರ ಮೋದಿ ಅವರು ಫ್ರಾನ್ಸ್‌ನ ಡಸಾಲ್ಟ್ ರಫೇಲ್ ಕಂಪನಿಯ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಸಚಿವಾಲಯ ತಳ್ಳಿ ಹಾಕಿದೆ.
ಫೆ.18ರಿಂದ 22ರವರೆಗೆ ನಡೆಯಲಿರುವ ಏರ್ ಷೋ, ಮೋದಿ ಅವರ ಕನಸಿನ "ಮೇಕ್ ಇನ್ ಇಂಡಿಯಾ'ಕ್ಕೆ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಹೇಳಲಾಗುತಿದ್ದು, ಭಾರತಕ್ಕೆ ಲಘು ಯುದ್ಧ ವಿಮಾನಗಳನ್ನು ಪೂರೈಸಲು ತುದಿಗಾಲಲ್ಲಿ ನಿಂತಿರುವ ಫ್ರಾನ್ಸ್ ಮೂಲದ ರಫೇಲ್ ಕಂಪನಿ ಈ ಏರ್ ಷೋವನ್ನು ಬಳಸಿಕೊಳ್ಳಲು ಹವಣಿಸುತ್ತಿದೆ. ಇದೇ ಕಾರಣಕ್ಕಾಗಿ ತನ್ನ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವಂತೆ ಫ್ರಾನ್ಸ್‌ನ ವಿದೇಶಾಂಗ ಸಚಿವ ಲೌರೆಂಟ್ ಫೇಬಿಯಸ್ ಸಮ್ಮುಖದಲ್ಲಿ ಮೋದಿ ಅವರಿಗೆ ರಫೇಲ್ ಕಂಪನಿ ಆಹ್ವಾನ ನೀಡಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮೋದಿ ಅವರು ರಫೇಲ್ ಕಂಪನಿಯ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಬಹುದು ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ, ಮೋದಿ ಹಾರಾಟ ಕುರಿತು ಯಾವುದೇ ಯೋಜನೆಗಳು ಇಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಒಂದು ವೇಳೆ, ಪ್ರಧಾನಿ ಮೋದಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರೆ, ಈ ಸಾಹಸ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗುತ್ತಿದ್ದರು.
Advertisement