ಸಿಸಿಬಿಗೆ ಸಿಬ್ಬಂದಿ ಕೊರತೆ, ತನಿಖೆ ಮೇಲೆ ಪರಿಣಾಮ

ಇಪ್ಪತ್ತೊಂದು ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ತೀವ್ರ ಏರಿಕೆಯಾಗಿದೆ. ನಗರದ ಅಪರಾಧ ಪ್ರಕರಣ...
ಸಿಸಿಬಿಗೆ ಸಿಬ್ಬಂದಿ ಕೊರತೆ, ತನಿಖೆ ಮೇಲೆ ಪರಿಣಾಮ

ಬೆಂಗಳೂರು: ಇಪ್ಪತ್ತೊಂದು ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ತೀವ್ರ ಏರಿಕೆಯಾಗಿದೆ. ನಗರದ ಅಪರಾಧ ಪ್ರಕರಣಗಳ ವ್ಯಾಪ್ತಿ ಬದಲಾಗಿದೆ, ಆದರೆ, ಅಂದು ನಗರ ಅಪರಾಧ ಘಟಕಕ್ಕೆ (ಸಿಸಿಬಿ) ಮಂಜೂರು ಮಾಡಲಾಗಿದ್ದ ಸಿಬ್ಬಂದಿ ಸಂಖ್ಯೆ ಇಂದಿಗೂ ಇದೆ!

ಹೌದು, ಭಯೋತ್ಪಾದಕ ಪ್ರಕರಣಗಳು, ಭೂಗತ ಲೋಕ, ಹಗರಣ, ಸೂಕ್ಷ್ಮ ಪ್ರಕರಣಗಲು ಹೀಗೆ ದೊಡ್ಡ ದೊಡ್ಡ ಪ್ರಕರಗಳ ತನಿಖೆ ನಡೆಸುವ ನಗರ ಅಪರಾಧ ಘಟಕ (ಸಿಸಿಬಿ) ಸಿಬ್ಬಂದಿ ಕೊರತೆಯಿಂದ ಬಳುಲುತ್ತಿದೆ.

1994ರಲ್ಲಿ ಅಪರಾಧ ದಳಕ್ಕೆ 125 ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಇಂದಿಗೂ ಅದೇ ಸಂಖ್ಯೆ ಇದೆ. ದುರಾದೃಷ್ಟ ಎಂದರೆ ಈ ಪೈಕಿ 40ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆ ನೇರವಾಗಿ ತನಿಖೆ ಮೇಲೆ ಪರಿಣಾಮ ಬೀರುತ್ತಿದ್ದು ಪರಿಣಾಮಕಾರಿ ತನಿಖೆಗೆ ಅಡ್ಡಿಯಾಗುತ್ತಿದೆ. ಸದ್ಯ ಲಭ್ಯವಿರುವ ಸುಮಾರು 80 ಸಿಬ್ಬಂದಿ ಪೈಕಿ ವಾಹನ ಚಾಲಕರು ಹಾಗೂ ಕಚೇರಿ ಕೆಲಸ ನಿರ್ವಹಿಸುವ ಸಿಬ್ಬಂದಿ ಸೇರಿದ್ದಾರೆ. ಇದೇ ವೇಳೆ ಮುಂಬೈ ಸಿಸಿಬಿಗೆ 1500 ಸಿಬ್ಬಂದಿ ಇದ್ದು ದೆಹಲಿ ಸಿಸಿಬಿಗೆ 1800 ಸಿಬ್ಬಂದಿ ಇದ್ದಾರೆ.

ಸಿಸಿಬಿಗೆ ಐವರು ಎಸಿಪಿಗಳು, 22 ಇನ್ಸ್ ಪೆಕಟ್ರ್‌ಗಳು, ಎಸ್ಸೈ, ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್ ಟೇಬಲ್ ಸೇರಿ 125 ಹುದ್ದೆ ಮಂಜೂರಾಗಿದೆ. ಈ ಪೈಕಿ 3 ಎಸಿಪಿ ಹಾಗೂ ಐವರು ಇನ್ಸ್ ಪೆಕ್ಟರ್ ಹುದ್ದೆ ಖಾಲಿ ಇವೆ. ಇದೇ ವೇಳೆ ಮಂಜೂರಾಗಿರುವ 94 ಕಾನ್ಸ್ ಟೇಬಲ್ ಹುದ್ದೆಗಳ ಪೈಕಿ 20 ಖಾಲಿ ಇವೆ.

2013ರ ಸೆಪ್ಟೆಂಬರ್ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗ ಮಾಡಲಾಯಿತು, ಅದಾದ ಬಳಿಕ ಖಾಲಿ ಇರುವ ಜಾಗಕ್ಕೆ ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಲೇ ಇಲ್ಲ, ಪರಿಣಾಮಕಾರಿ ಕೆಲಸ ಮಾಡಲು ಹೆಚ್ಚಿನ ಕಾನ್ಸ್ ಟೇಬಲ್‌ಗಳ ಅಗತ್ಯ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಭಾರಿ ಪ್ರಮಾಣದಲ್ಲಿ ಕೆಲಸ ನಿರ್ವಹಣೆ ಮಾಡಬೇಕಿದೆ. ಅದರೊಂದಿಗೆ ನೇರವಾಗಿ ಕೆಲಸ ಮಾಡದೇ ಅಪರಾಧ ಕೃತ್ಯಗಳ ಬಗ್ಗೆ ನಿಗಾ ಇರಿಸುವ ಹಾಗೂ ಅದನ್ನು ತಡೆಗಟ್ಟುವ ಮಹತ್ವದ ಜವಾಬ್ದಾರಿ ಇದೆ. ಸಿಬ್ಬಂದಿ ಕೊರತೆ ಅದಕ್ಕೆ ಕೊಡಲಿ ಪೆಟ್ಟು ಹಾಕಿದೆ.

ಖಾಸಗಿ ಶಾಲೆಯಲ್ಲಿ ಅತ್ಯಾಚಾರ ಪ್ರಕರಣ, ಇಸಿಸ್ ಉಗ್ರ ಸಂಘಟನೆ ಟ್ವಿಟರ್ ಖಾತೆ ನಿರ್ವಹಿಸಿದ ಮೆಹ್ದಿ ಪ್ರಕರಣ, ಭಟ್ಕಳದ ಶಂಕಿತ ಉಗ್ರರ ಬಂಧನ, ಚರ್ಚ್ ಸ್ಟ್ರೀಟ್ ಬಾಂಬ್ ಸ್ಪೋಟ ಪ್ರಕರಣ ಹೀಗೆ ಹತ್ತು ಹಲವು ಮಹತ್ವದ ಪ್ರಕರಣಗಳನ್ನು ಸಿಸಿಬಿ ನಿರ್ವಹಿಸುತ್ತಿದೆ. ಸಿಬ್ಬಂದಿ ಕೊರತೆ ನಡುವೆಯೂ ಸಿಸಿಬಿ ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಆದರೆ, ಸಿಬ್ಬಂದಿ ಅಗತ್ಯತೆ ಹೆಚ್ಚಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಸೈಕಲ್ ಸ್ಕ್ವಾಡ್
1970ರಲ್ಲಿ ನಗರದಲ್ಲಿ ಸೈಕಲ್ ಕಳ್ಳತನ ಪ್ರಕರಣ ಅತಿ ಹೆಚ್ಚಾಗಿತ್ತು. ಅದಕ್ಕಾಗಿ ಸೈಕಲ್ ಕಳ್ಳರ ಬಂಧನಕ್ಕೆ 'ಸೈಕಲ್ ಸ್ಕ್ವಾಡ್ ಆರಂಭಿಸಲಾಯಿತು. ಬಳಿಕ ಪರಿಣಾಮಕಾರಿ ಕೆಲಸ ಹಿನ್ನೆಲೆಯಲ್ಲಿ ಅದನ್ನು ಅಪರಾಧ ಘಟಕವೆಂದು ನಾಮಕರಣ ಮಾಡಲಾಯಿತು. ಸದ್ಯ ಸಿಸಿಬಿ 2250 ಪ್ರಕರಣಗಳ ತನಿಖೆ ನಡೆಸುತ್ತಿದೆ. ಈ ಪೈಕಿ ಭಯೋತ್ಪಾದಕ ಚಟುವಟಿಕೆ ಪ್ರಕರಣಗಳು ಹಾಗೂ ಹಿರಿಯ ಅಧಿಕಾರಿಗಳಿಂದ ಶಿಫಾರಸಾಗಿರುವ ಮಹತ್ವದ ಪ್ರಕರಣಗಳಿವೆ.

ಸಿಸಿಬಿಯಲ್ಲಿ ಸಂಘಟಿತ ಅಪರಾಧ ದಳ, ವಂಚನೆ ಹಾಗೂ ದುರುಪಯೋಗ ದಳ, ಹತ್ಯೆ ಹಾಗೂ ಕಳ್ಳತನ ದಳ, ವಿಶೇಷ ವಿಚಾರಣೆ, ಮಹಿಳಾ ಮತ್ತು ಮಾದಕದ್ರವ್ಯ ನಿಗ್ರಹ ದಳ ಹೀಗೆ ಐದು ವಿಶೇಷ ದಳಗಳಿದ್ದು ತಲಾ ಒಬ್ಬ ಎಸಿಪಿ ನೇತೃತ್ವ ವಹಿಸಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com