ಬಿಬಿಎಂಪಿಯನ್ನು 5 ಭಾಗಗಳಾಗಿ ವಿಭಜಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ನಾಲ್ಕು ದಿಕ್ಕುಗಳಿಗೆ ಒಂದು ಹಾಗೂ ಕೇಂದ್ರಕ್ಕೆ ಒಂದರಂತೆ ಐದು ಪಾಲಿಕೆಯನ್ನಾಗಿ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ನಾಲ್ಕು ದಿಕ್ಕುಗಳಿಗೆ ಒಂದು ಹಾಗೂ ಕೇಂದ್ರಕ್ಕೆ ಒಂದರಂತೆ ಐದು ಪಾಲಿಕೆಯನ್ನಾಗಿ ಮಾಡಬೇಕು. ಈ ಪಾಲಿಕೆಗಳಿಗೆ ಮೇಯರ್ ಗಳು ನೇರವಾಗಿ ಐದು ವರ್ಷಗಳ ಅವಧಿಗೆ ಜನರಿಂದ ಚುನಾಯಿತರಾಗಬೇಕು. ಪ್ರತಿ ಪಾಲಿಕೆಗೂ ಪ್ರತ್ಯೇಕ ಪೋಲೀಸ್ ಆಯುಕ್ತರಿರಬೇಕು. ಬಿಡಿಎ ಬದಲು ಮೂಲಸೌಕರ್ಯ ನಿಗಮ ಇರಬೇಕು, ನಗರಕ್ಕೆಲ್ಲ ಯೋಜನೆಗೆ ಒಂದೇ ಸಮಿತಿ ಇರಬೇಕು ಹಾಗೂ ಪ್ರತಿ ಪಾಲಿಕೆಗೂ ಗಣ್ಯರು ಹಾಗೂ ತಜ್ಞರನ್ನು ನಾಮನಿರ್ದೇಶನ ಮಾಡಬೇಕು.
ಬಿಬಿಎಂಪಿ ಪುನಾರಚನೆಗೆ ಸರ್ಕಾರ ರಚಿಸಿರುವ ತಜ್ಞರ ಸಮಿತಿಗೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿಪ್ಯಾಕ್) ನೀಡಿರುವ ಸಲಹೆಗಳು ಇವು. ಉಪಾಧ್ಯಕ್ಷ ಟಿ.ವಿ. ಮೋಹನ್ದಾಸ್ ಪೈ, ಸಿಇಒ ರೇವತಿ ಅಶೋಕ್, ಡಾ. ಹರಿ ಪರಮೇಶ್ವರ್, ಸೆಂಟರ್  ಫಾರ್ ಸ್ಮಾರ್ಟ್ ಸಿಟೀಸ್ನ ನಿರ್ದೇಶಕ ಆರ್.ಕೆ. ಮಿಶ್ರಾ ಅವರನ್ನು ಒಳಗೊಂಡ ನಿಯೋಗ ತಜ್ಞರ ಸಮಿತಿಯ ಅಧ್ಯಕ್ಷ ಬಿ.ಎಸ್. ಪಾಟೀಲ್, ಸದಸ್ಯರಾದ ಸಿದ್ದಯ್ಯ ಹಾಗೂ ರವಿಚಂದರ್ ಅವರನ್ನು ಭೇಟಿ ಮಾಡಿ ಈ ಸಲಹೆಯ ವರದಿ ಸಲ್ಲಿಸಿತು. ಆದಾಯ ಉತ್ಪನ್ನ ಸಾಧ್ಯತೆ, ಜನಸಂಖ್ಯೆ, ರಾಜಕೀಯ ಪರಾಮರ್ಶೆ, ಆಡಳಿತ ಔಚಿತ್ಯ, ಪ್ರಾಂತೀಯ ಪ್ರಗತಿ ಸಾಮರ್ಥ್ಯದಂತಹ ವಿವರಗಳನ್ನು ವಿಮರ್ಶೆ ಮಾಡಿದ ನಂತರ
ಬೆಂಗಳೂರನ್ನು 5 ಪಾಲಿಕೆಯನ್ನಾಗಿ ವಿಭಜಿಸಬೇಕು ಎಂದು ಸಲಹೆ ನೀಡಲಾಗಿದೆ.
ಬೆಂಗಳೂರು ಸೆಂಟ್ರಲ್ (ಹಿಂದಿದ್ದ ಬಿಎಂಪಿ), ಉತ್ತರ (ಯಲಹಂಕ ಮತ್ತು ದಾಸರಹಳ್ಳಿ), ದಕ್ಷಿಣ (ಬೊಮ್ಮನಹಳ್ಳಿ), ಪೂರ್ವ (ಮಹದೇವಪುರ) ಮತ್ತು ಪಶ್ಚಿಮ (ರಾಜರಾಜೇಶ್ವರಿ ನಗರ) ಎಂದು 5 ಪಾಲಿಕೆಯನ್ನು ರಚಿಸಬೇಕು. ಬೆಂಗಳೂರು ಸೆಂಟ್ರಲ್ ಪಾಲಿಕೆ ಹಿಂದಿನ ಬಿಎಂಪಿಯಂತೆ ಉಳಿದುಕೊಳ್ಳಬೇಕು. ಉಳಿದ ನಾಲ್ಕು ಪಾಲಿಕೆಗಳಲ್ಲಿ 20 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ರಚಿಸಬೇಕು. ಈಗಿರುವ ವಲಯದಂತೆಯೇ  ಹೊಸ ಪಾಲಿಕೆಗಳನ್ನು ರಚಿಸುವುದರಿಂದ ಆಡಳಿತದ ವ್ಯಾಪ್ತಿ ಹೆಚ್ಚು ಬದಲಾಗುವುದಿಲ್ಲ. ಎಲ್ಲ 5 ಪಾಲಿಕೆಗಳಿಗೆ ಸ್ಪರ್ಧಾತ್ಮಕ ಕಾರ್ಯ ನೀಡಬೇಕು. ಪ್ರತಿ ಪಾಲಿಕೆಗೆ ಜನರಿಂದಲೇ ನೇರವಾಗಿ ಮೇಯರ್ ಐದು ವರ್ಷದ ಅವಧಿಗೆ ಆಯ್ಕೆಯಾಗಬೇಕು. ಆಯ್ಕೆಯಾದ  ಕಾರ್ಪೋರೇಟರ್ಗಳ ಜತೆಗೆ, ನಗರದ ಗಣ್ಯರು ಮತ್ತು ತಜ್ಞರನ್ನು ಪಾಲಿಕೆಗೆ ನಾಮನಿರ್ದೇಶನ ಮಾಡಬೇಕು. ಪ್ರತಿ ಪಾಲಿಕೆಗೆ ಆಯುಕ್ತರ ನೇತೃತ್ವ ಇರಬೇಕಿದ್ದು, ಅವರಿಗೆ 5 ವರ್ಷದ ಅವಧಿ ಇರಬೇಕು. ಪ್ರತಿ ಪಾಲಿಕೆಗೆ ಪ್ರತ್ಯೇಕ ಪೋಲೀಸ್ ಆಯುಕ್ತರಿರಬೇಕು. ತಂತ್ರಜ್ಞಾನ, ಇಆಡಳಿತ, ಉನ್ನತ ಮೂಲಸೌಕರ್ಯದ ಬಗ್ಗೆ ಗುರಿ ಇರಬೇಕು. ಕೇಂದ್ರಿತ ಯೋಜನೆ ಮತ್ತು ಸಂಪನ್ಮೂಲ ಬಳಕೆಗೆ ಬೆಂಗಳೂರು ಮೆಟ್ರೊಪಾಲಿಟನ್
ಕೌನ್ಸಿಲ್ (ಬಿಎಂಸಿ) ರಚನೆಯಾಗಬೇಕು. ಬೆಂಗಳೂರು ಅಭಿವೃದ್ಧಿ  ಪ್ರಾಧಿಕಾರದ ಹೊರತಾಗಿ ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ  ನಿಗಮ (ಬಿಐಡಿಸಿ) ರಚನೆಯಾಗಬೇಕು. ಎಲ್ಲ 5 ಪಾಲಿಕೆಗಳ ಎಲ್ಲ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ  ಮತ್ತು ನಿರ್ವಹಣೆಯನ್ನು ಈ ನಿಗಮ ನಿರ್ವಹಿಸಬೇಕು. ಇದರಲ್ಲಿ ಪ್ರಮುಖ ರಸ್ತೆಗಳು, ಬೃಹತ್ ನೀರುಗಾಲುವೆ, ಕೆರೆಗಳು, ಅರಣ್ಯ ಸೇರಿರಬೇಕು.
ಆಯಾ ಪಾಲಿಕೆಗಳಲ್ಲಿ ಸಂಗ್ರಹವಾಗುವ ಮುದ್ರಾಂಕ ಶುಲ್ಕ ಹಾಗೂ ರಸ್ತೆ ತೆರಿಗೆಯಲ್ಲಿ ತಲಾ ಶೇ.50ರಷ್ಟನ್ನು ಆಯಾ ನಗರ ಅಭಿವೃದ್ಧಿಗೆ ಬಳಸಬೇಕು. ಪಾಲಿಕೆಗಳಿಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೂಲಸೌಕರ್ಯ ಸೆಸ್ ವಿಧಿಸಬೇಕು. ಹೊರಭಾಗದ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪಾಲಿಕೆಗಳಲ್ಲಿ ಹೊಸ ಅಭಿವೃದ್ಧಿ ನಿಧಿ ಸ್ಥಾಪನೆಗೆ ಪ್ರತಿ ಚದರ ಅಡಿಗೆ ರು. 100 ಮೂಲಸೌಕರ್ಯ ಸೆಸ್ ಸಂಗ್ರಹಿಸಬೇಕು ಎಂದು ಸಲಹಾ ವರದಿ ನೀಡಲಾಗಿದೆ.

ಬೆಂಗಳೂರು ಹೊರಭಾಗದಲ್ಲಿ ಪ್ರಗತಿಯಾಗುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಪಾಲಿಕೆಗಳೂ ತನ್ನದೇ ಆದಾಯ ಸಂಗ್ರಹಿಸಿ ಕೊಳ್ಳಬೇಕು. ತಜ್ಞರ ಸಮಿತಿಗೆ ಪುನಾರಚನೆಗೆ ಸಂಬಂಧಿಸಿದ ಡೇಟಾ ನೀಡಲಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ವಿಸ್ತರಣೆಯ ಸಲಹೆಯನ್ನೂ ನೀಡಿದ್ದೇವೆ.
- ಮೋಹನ್ದಾಸ್ ಪೈ
ಉಪಾಧ್ಯಕ್ಷ, ಬಿಪ್ಯಾಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com