
ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ನ್ಯಾನೋ ಸೈನ್ಸ್ ಎಂಜಿನಿಯರಿಂಗ್ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶಕ್ಕೆ ಸಮರ್ಪಿಸಿದರು.
ನಂತರ ಕೇಂದ್ರಕ್ಕೆ ಭೇಟಿ ಕೊಟ್ಟ ಅವರು, ಸಂಸ್ಥೆಯ ಆಶಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕೇಂದ್ರ ಭಾರತದ ಮೈಕ್ರೋ ಮತ್ತು ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಅತ್ಯಾಧುನಿಕ ಮತ್ತು ಸಮಗ್ರ ಪ್ರಯೋಗಾಲಯ ಗುಚ್ಛವಾಗಿದ್ದು, ವಿಶ್ವದಲ್ಲೇ ಇದೊಂದು ಮೈಲುಗಲ್ಲಾಗಿದೆ. ನ್ಯಾನೋ ಎಲೆಕ್ಟ್ರಾನಿಕ್ಸ್ ಮತ್ತು ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನದ ಮುಂದಾಳತ್ವ ವಹಿಸಲಿರುವ ಈ ಕೇಂದ್ರ, ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಆಶಯದಂತೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಒಂದು ಉಪಕ್ರಮವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೆದುಳು ಸಂಶೋಧನೆ
ಐಐಎಸ್ಸಿ ಆವರಣದಲ್ಲಿ ನೂತನವಾಗಿ ಸ್ಥಾಪಿತವಾಗುವ ಮೆದುಳು ಸಂಶೋಧನಾ ಕೇಂದ್ರಕ್ಕೆ ಇದೇ ಸಂದರ್ಭದಲ್ಲಿ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ಕೇಂದ್ರ ಐಐಎಸ್ಸಿಯ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಇದೇ ವೇಳೆ ತೈಲ ಮತ್ತು ಅನಿಲ ಸಂಗ್ರಹಿಸುವ ನೂತನ ತಂತ್ರಜ್ಞಾನ ವಿಚಾರವಾಗಿ ಒಎನ್ ಜಿಸಿ ಮತ್ತು ಸೂಪರ್ ವೇವ್ ಟೆಕ್ನಾಲಜೀಸ್ ನಡುವೆ ನಡೆದ ಒಡಂಬಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾದರು. ಐಐಎಸ್ಸಿಯಲ್ಲಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳ ಬಗ್ಗೆ ಪ್ರಧಾನಿಯವರಿಗೆ ವಿವರ ನೀಡಲಾಯಿತು. ಸೌರ ಇಂಧನ, ಜಲ ನಿರ್ವಹಣೆ, ಕೃಷಿ ಪ್ರದೇಶಗಳ ವಿಚಾರದಲ್ಲಿ ಐಐಎಸ್ಸಿ ಕೈಗೊಂಡಿರುವ ಸಂಶೋಧನೆಗಳ ಬಗ್ಗೆ ಮತ್ತು ಐಐಎಸ್ಸಿ- ವಿವಿಧ ಸಂಶೋಧನಾ ಸಂಸ್ಥೆಗಳ ನಡುವಿನ ಸಮನ್ವಯದ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು. ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ್, ಧರ್ಮೇಂದ್ರ ಪ್ರಧಾನ್ ಈ ವೇಳೆ ಉಪಸ್ಥಿತರಿದ್ದರು. ಐಐಎಸ್ಸಿ ಮುಖ್ಯಸ್ಥರು, ವಿಜ್ಞಾನಿಗಳೂ ಹಾಜರಿದ್ದರು.
Advertisement