ಸ್ಥಳೀಯ ಸಂಸ್ಥೆಗಳಿಗೂ ಅಂಕ!

ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ಅವುಗಳಿಗೆ ಅಂಕ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ...
ಸ್ವಚ್ಛ ಭಾರತ್ ಮಿಷನ್ ಕಾರ್ಯಾಗಾರ
ಸ್ವಚ್ಛ ಭಾರತ್ ಮಿಷನ್ ಕಾರ್ಯಾಗಾರ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ಅವುಗಳಿಗೆ ಅಂಕ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.

ಕೇಂದ್ರ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆಯೋಜಿಸಿದ್ದ `ಸ್ವಚ್ಛ ಭಾರತ್ ಮಿಷನ್' ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಬದಲಾವಣೆ ತರಬೇಕಿದೆ. ಶೌಚಾಲಯ ನಿರ್ಮಾಣ, ಕಸ ವಿಲೇವಾರಿ, ಆದಾಯ ಸಂಗ್ರಹ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಪ್ರಗತಿ ಸಾಧಿಸುವ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅಂಕ ನೀಡಲಿದೆ. ಗ್ರೇಡ್ ಮಾದರಿಯ ಅಂಕ ನೀಡಲಿದ್ದು, ಹೆಚ್ಚಿನ ಅಂಕ ಪಡೆದ ಸಂಸ್ಥೆಗಳಿಗೆ ಸರ್ಕಾರ ಸೂಕ್ತ ಪ್ರೋತ್ಸಾಹ ಹಾಗೂ ಹೆಚ್ಚಿನ ಅನುದಾನ ನೀಡಲಿದೆ.

ಇದು ಸ್ಥಳೀಯ ಸಂಸ್ಥೆಗಳ ನಡುವಿನ ಆರೋಗ್ಯಕರ ಸ್ಪರ್ಧೆಗೂ ಕಾರಣವಾಗಲಿದೆ ಎಂದರು. ಅಧಿಕ ಆದಾಯ ಸಂಗ್ರಹ ಹಾಗೂ ಪಿಪಿಪಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕೆಲಸ ಮಾಡಬೇಕು. ಸಾಮಾಜಿಕ ಹೊಣೆಗಾರಿಕೆಯಡಿ ಸಂಸ್ಥೆಗಳು ನೆರವು ನೀಡುವುದಾದರೆ ಆ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

2019ರ ವೇಳೆಗೆ ದೇಶವನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಲಾಗಿದೆ. ಆದರೆ ಕೇಂದ್ರ ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಸಂಸ್ಥೆಗಳೇ ಗಂಭೀರವಾಗಿ ಸ್ವಚ್ಛತಾ ಅಭಿಯಾನ ನಡೆಸಬೇಕು. ದೇಶದಲ್ಲಿ ಶೇ.30 ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದು, ಈ ಪ್ರಮಾಣ 2050ರ ವೇಳೆಗೆ ಶೇ.50 ಕ್ಕೆ ಏರಲಿದೆ. ಹೀಗಾಗಿ ಸ್ವಚ್ಛತಾ ಮಿಷನ್ ಮೂಲಕ ನಗರಗಳನ್ನು ಶುಚಿಯಾಗಿಡಲು ಶ್ರಮಿಸಬೇಕು ಎಂದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರು1 ಅಥವಾ ರು2 ನೀಡಬೇಕು ಎಂಬ ಕಾರಣಕ್ಕಾಗಿ ಸಾರ್ವಜನಿಕ ಶೌಚಾಲಯಗಳನ್ನು ಜನರು ಬಳಸುವುದು ಕಡಿಮೆಯಾಗಿದೆ. ನಗರಗಳಲ್ಲಿ ಶೌಚಾಲಯ ಬದಲು ಸಾರ್ವಜನಿಕ ಸ್ಥಳಗಳನ್ನು ಬಳಸುವುದು ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಹಣ ಪಾವತಿ ಮಾಡುವ ಪದ್ಧತಿಯನ್ನು ಕೈ ಬಿಟ್ಟು ಪೂರ್ಣ ಉಚಿತವಾಗಿ ಶೌಚಾಲಯವನ್ನು ಬಳಕೆಗೆ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.

ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರಾಜ್ಯಗಳು ಒಟ್ಟಾಗಿ ನಗರಾಭಿವೃದ್ಧಿಯ ಯೋಜನೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಪ್ರೋತ್ಸಾಹಿಸಬೇಕು. ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಕೇಂದ್ರ ಸರ್ಕಾರ ಸೂಕ್ತ ರಾಜ್ಯಗಳ ನಡುವೆ ಹೊಂದಾಣಿಕೆ ತರುವ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು. ಸಚಿವ ಖಮರುಲ್ ಇಸ್ಲಾಂ, ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ಜಂಟಿ ಕಾರ್ಯದರ್ಶಿ ಪ್ರವೀಣ್ ಪ್ರಕಾಶ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿ ನಾರಾಯಣ ಹಾಜರಿದ್ದರು.

ಗಣಿ ಹರಾಜಿನಿಂದ ರು60 ಸಾವಿರ ಕೋಟಿ ಸಂಗ್ರಹ
20 ಗಣಿಗಳ ಹರಾಜಿನಿಂದ ರು60 ಸಾವಿರ ಕೋಟಿ ಸಂಗ್ರಹವಾಗಿದ್ದು, ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಲಾಭವಾಗಲಿದೆ. ಉಳಿದ 234 ಗಣಿಗಳ ಹರಾಜಾಗಿದ್ದರೆ ಸರ್ಕಾರಕ್ಕೆ ಮತ್ತಷ್ಟು ಆದಾಯ ಬರುತ್ತಿತ್ತು. ಈ ಹರಾಜಿನಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ದರ ಇಳಿಕೆಯಾಗಲಿದೆ. ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ದೊರೆಯಲಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.

ರು80 ಕೋಟಿ ಅನುದಾನ
ಸ್ವಚ್ಛತಾ ಮಿಷನ್‍ಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ರು80 ಕೋಟಿ ಅನುದಾನ ನೀಡಲಾಯಿತು. ಮೂರು ವರ್ಷಗಳಲ್ಲಿ ಒಟ್ಟು ರು720 ಕೋಟಿ ನೀಡಲಾಗುವುದು. ಮಿಷನ್‍ಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿ ಕೈಪಿಡಿ ಬಿಡುಗಡೆ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com