
ಮಂಗಳೂರು: ನಗರದಲ್ಲಿ ಮತ್ತೆ ಚರ್ಚ್ ಮೇಲೆ ದಾಳಿ ನಡೆದಿದ್ದು, ಮಂಗಳೂರಿನ ಕೋಟೆಗಾರು ಬಳಿಯ ಚರ್ಚ್ ಹೊರಾಂಗಣದಲ್ಲಿರುವ ಮರ್ಸಿಯಮ್ಮ ಮಾತೆ ಪಾರ್ಥನಾ ಮಂದಿರದ ಮೇಲೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದಾರೆ.
ದುಷ್ಕರ್ಮಿಗಳ ಕಲ್ಲು ತೂರಾಟದಿಂದ ಮಂದಿರದ ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಸ್ಥಳದಲ್ಲಿ ಮದ್ಯದ ಬಾಟಲಿ ಹಾಗೂ ಸಿಗರೇಟ್‌ಗಳು ದೊರೆತಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದ್ ಅವರು, ಕೆಲವು ಸಮಾಜಘಾತುಕ ಶಕ್ತಿಗಳು ಜನರಲ್ಲಿ ಆತಂಕ ಸೃಷ್ಟಿಸಿ, ಶಾಂತಿಯನ್ನು ಕದಡುವ ಸಲುವಾಗಿ ಈ ರೀತಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳಿಂದ ಜನರು ಹೆದರಬಾರದು ಎಂದು ಅಭಯವನ್ನು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಗರೇಟು ಮದ್ಯಪಾನದ ಬಾಟಲಿಗಳನ್ನು ನೋಡಿದರೆ ಈ ಕೃತ್ಯವನ್ನು ಸಣ್ಣ ಗುಂಪು ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿಗಳನ್ನು ಹಿಡಿಯಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
Advertisement