
ಬೆಂಗಳೂರು: ಹಾಲಿ ಪೊಲೀಸ್ ಮಹಾನಿರ್ದೇಶಕ ಲಾಲ್ ರುಕಾಮ್ ಪಚಾವೋ ಅವರ ಅಧಿಕಾರವಧಿ ನಾಳೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ನಾಲ್ವರು ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ಗೃಹ ಸಚಿವ ಜಾರ್ಜ್ ಶುಕ್ರವಾರ ಹೇಳಿದ್ದಾರೆ.
ಉನ್ನತಾಧಿಕಾರ ಸಮಿತಿ ಸಭೆ ಬಳಿಕ ಮಾತನಾಡಿದ ಗೃಹ ಸಚಿವರು, ಓಂ ಪ್ರಕಾಶ್, ಸುಶಾಂತ್ ಮಹಾಪಾತ್ರ, ಆರ್.ಕೆ ದತ್ತಾ ಮತ್ತು ಬಿಪಿನ್ ಗೋಪಾಲಕೃಷ್ಣ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದೇವೆ.
ಈ ನಾಲ್ವರ ಹೆಸರಿನ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಲಾಗುವುದು. ಈ ಪೈಕಿ ಒಬ್ಬರನ್ನ ಡಿಜಿ-ಐಜಿಪಿ ಸ್ಥಾನಕ್ಕೆ ನೇಮಕ ಮಾಡಲಾಗುವುದು.
ಸೂಕ್ತರನ್ನ ಸಿಎಂ ಸಿದ್ದರಾಮಯ್ಯ ನೇಮಕ ಮಾಡುತ್ತಾರೆ. ನೇಮಕ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಿದೆ. ನೂತನ ಡಿಜಿ-ಐಜಿಪಿ ನಾಳೆ ಅಧಿಕಾರ ಸ್ವೀಕರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಡಿಜಿಪಿಯಾಗಿದ್ದ ಓಂಪ್ರಕಾಶ್ ಅವರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬಂದಿದೆ.
Advertisement