

ಮಡಿಕೇರಿ: ನಗರದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಮಾವೇಶ ಜಿಲ್ಲೆಯ ಇತಿಹಾಸದಲ್ಲಿಯೇ ಅಭೂತ ಪೂರ್ವ ಶಕ್ತಿ ಪ್ರದರ್ಶನ ವೇದಿಕೆಯಾಗಿ ಕಂಡುಬಂತು. ಸರ್ವ ಪಕ್ಷಗಳ ಪ್ರಮುಖರು ವೇದಿಕೆಯಲ್ಲಿದ್ದು ಒಗ್ಗಟ್ಟು ಪ್ರದರ್ಶಿಸಿದರು.
ಮಡಿಕೇರಿಯ ಮುಖ್ಯ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ಕೂಡ ನಡೆಯಿತು. ಕೆಲ ಪ್ರಮುಖ ರಾಜಕಾರಣಿಗಳ ಗೈರು ಹಾಜರಿ ಅಚ್ಚರಿಗೂ ಕಾರಣವಾಯಿತು.
ಸರ್ವಪಕ್ಷಗಳು ಒಗ್ಗಟ್ಟಾಗಿ ಕಸ್ತೂರಿ ರಂಗನ್ ವರದಿ ವಿರೋಧಿ ಸಮಾವೇಶ ಹಮ್ಮಿಕೊಂಡಿದ್ದವು. ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾವಿರಾರು ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನೂರಾರು ಬಸ್‌ಗಳಲ್ಲಿ ಜನ ಮಡಿಕೇರಿಗೆ ಸಾಲು ಸಾಲಾಗಿ ಆಗಮಿಸಿದ್ದರು.
ಪ್ರಮುಖರ ಗೈರು
ಸಮಾವೇಶದ ಕೇಂದ್ರ ಬಿಂದುವಾಗ ಬೇಕಾಗಿದ್ದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಮಾಡಿ ಸಂಸದ ಎಚ್.ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಟಿ.ಪ್ರದೀಪ್, ಮಾಜಿ ಸಚಿವರಾದ ಎಂ.ಎಂ.ನಾಣಯ್ಯ, ಸುಮಾವಸಂತ್, ಕರಕುಶಲ ನಿಗಮದ ಅಧ್ಯಕ್ಷೆ ವೀಣಾ ಅಚ್ಚಯ್ಯ ರಂಥ ಪ್ರಮುಖ ಕಾಂಗ್ರೆಸ್ ನಾಯಕರ ಗೈರುಹಾಜರಿ ಎದ್ದು ಕಂಡಿತು.
ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಅಂತೆಯೇ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ, ಬಿ.ಎ.ಜೀವಿಯಜ ಕೂಡ ಸಮಾವೇಶದಿಂದ ದೂರವೇ ಉಳಿದಿದ್ದರು.