
ಬೆಂಗಳೂರು: ಮುಂಬೈ ಹಾಗೂ ಪುಣೆಯಿಂದಲೂ ಕೆಲವು ಯುವಕರು ಇಸಿಸ್ ಸೇರಿದ್ದಾರೆ ಎನ್ನುವ ಮಾಹಿತಿ ಇದ್ದು, ಆ ಪೈಕಿ ಪುಣೆಯಿಂದ ಇರಾಕ್‌ಗೆ ತೆರಳಿ ಇಸಿಸ್ ಜತೆ ಕೆಲಸ ಮಾಡುತ್ತಿರುವ ಯುವಕನೊಂದಿಗೆ ನಗರದಲ್ಲಿ ಬಂಧಿತ ಇಸಿಸ್ ಟ್ವಿಟರ್ ನಿರ್ವಾಹಕ ಮೆಹ್ದಿ ಮಸ್ರೂರ್ ಬಿಸ್ವಾಸ್ ನೇರ ಸಂಪರ್ಕದಲ್ಲಿದ್ದ.
ತನಿಖೆಯ ವೇಳೆ ಈ ವಿಚಾರ ಬಹಿರಂಗವಾಗಿದ್ದು, ಈ ಇಬ್ಬರು ಹಲವು ಬಾರಿ ಟ್ವಿಟರ್ ಡೈರಕ್ಟ್ ಮೆಸೇಜ್ ಮೂಲಕ ಚಾಟ್ ಮಾಡಿದ್ದಾರೆ. ಆತನಿಂದ ಇಸಿಸ್ ಚಟುವಟಿಕೆಗಳು, ಸೇರಲು ಬೇಕಾಗುವ ಕ್ರಮಗಳ ಬಗ್ಗೆ ಸಲಹೆ ಸೂಟನೆಗಳನ್ನು ಈ ಮೆಸೇಜ್ ಮೂಲಕ ಮೆಹ್ದಿ ಪಡೆದುಕೊಳ್ಳುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ತಿಳಿಸಿದರು. ಇಸಿಸ್ ಉಗ್ರನೊಬ್ಬ ಸಕ್ರಿಯವಾಗಿರುವ ಬಗ್ಗೆ ಟ್ವೀಟ್ ಅಕೌಂಟ್ ಮೂಲಕ ಮಾಹಿತಿ ಲಭ್ಯವಾಗಿದೆ. ಅದೇ ವ್ಯಕ್ತಿಗೆ ಮೆಹ್ದಿ ಟ್ವಿಟರ್ ಸಂದೇಶ ಕಳುಹಿಸುತ್ತಿದ್ದು, ಇತ್ತೀಚಿನ ಪರಿಶೀಲನೆ ವೇಳೆ ಖಚಿತಗೊಂಡಿದೆ.
ಒಟ್ಟು 12 ಸಾವಿರ ನೇರ ಸಂದೇಶಗಳನ್ನು ಶಮ್ಮಿವಿಟ್ನೆಸ್ ಅಕೌಂಟ್ ಫಾಲೋ ಮಾಡುತ್ತಿದ್ದವರಿಗೆ ಮೆಹ್ದಿ ಕಳುಹಿಸಿದ್ದಾನೆ. ಆದರೆ ಈ ಪೈಕಿ ಎಷ್ಟು ಜನ ಇಸಿಸ್ ಜತೆಗಿದ್ದಾರೆ ಎನ್ನುವುದಿನ್ನೂ ಖಚಿತಗೊಂಡಿಲ್ಲ. ಅಕೌಂಟ್‌ಗಳ ಮೂಲ ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಕೆಲವು ಅಕೌಂಟ್‌ಗಳು ಯಾವ ಪ್ರದೇಶದಿಂದ ಚಾಲ್ತಿಯಲ್ಲಿವೆ ಎನ್ನುವುದು ತಿಳಿಯದಂತೆ ಪ್ರಾಕ್ಸಿ ಸರ್ವರ್ ಬಳಸಲಾಗಿದೆ ಎಂದರು.
ಇರಾಕ್ ಟೈಮಿಂಗ್: ಶಮ್ಮಿ ವಿಟ್ನೆಸ್ ಅಕೌಂಟ್‌ನಲ್ಲಿ ಇರಾಕ್‌ನ ಸಮಯ ಅಂದರೆ ಭಾರತದ ಕಾಲಮಾನಕ್ಕಿಂತ ಎರಡೂವರೆ ತಾಸು ಹಿಂದಕ್ಕೆ ಟೈಮ್ ಇಟ್ಟುಕೊಂಡಿದ್ದ. ಆ ಮೂಲಕ ಇರಾಕ್‌ನಲ್ಲಿರುವ ಉಗ್ರರು ಹಾಗೂ ಇಸಿಸ್ ಪರ ಇರುವವರಿಗೆ ತಮ್ಮ ನಡುವೆ ವ್ಯಕ್ತಿಯೇ ಟ್ವೀಟ್ ನಿರ್ವಹಿಸುತ್ತಿದ್ದಾನೆ ಎನ್ನುವ ನಂಬಿಕೆ ಬರುವಂತೆ ಮಾಡಿದ್ದ ಎಂದು ಅವರು ತಿಳಿಸಿದರು.
ಭಾರತದ ಚಟುವಟಿಕೆ ಬಗ್ಗೆ ಸಮರ್ಥನೆ ಇಲ್ಲ
ಈ ವರೆಗಿನ ವಿಚಾರಣೆಯಲ್ಲಿ ಮೆಹ್ದಿ ಎಲ್ಲಿಯೂ ಭಾರತದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿರುವುದು ಕಂಡು ಬಂದಿಲ್ಲ. ಅಲ್ಲದೇ, ಭಾರತದ ಮೇಲೆ ದಾಳಿಗೆ ಕುಮ್ಮಕ್ಕು ನೀಡುವಂತೆ ಸಂದೇಶಗಳನ್ನು ಟ್ವೀಟ್ ಮಾಡಿರುವುದೂ ಕಂಡುಬಂದಿಲ್ಲ. ಅಲ್ಲದೇ ಭಾರತೀಯರನ್ನು ಇಸಿಸ್‌ಗೆ ನೇಮಿಸಿರುವುದಕ್ಕೆ ಯಾವುದೇ ಸಾಕ್ಷಿ, ಮಾಹಿತಿಗಳೂ ಸಿಕ್ಕಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ರೆಡ್ಡಿ ಉತ್ತರಿಸಿದರು.
ಯಾರು ಎನ್ನುವುದು ಪತ್ತೆ ಕಷ್ಟ
ಸದ್ಯ ಶಮ್ಮಿ ವಿಟ್ನೆಸ್ ಫಾಲೋ ಮಾಡುತ್ತಿದ್ದ ಸಾವಿರಾರು ಮಂದಿ ಪೈಕಿ ಯಾರು ಉಗ್ರರು, ಯಾರು ಬೆಂಬಲಿಗರು, ಯಾರು ಮಾಹಿತಿ ಪಸರಿಸುವವರು? ಈತನ ಕುಮ್ಮಕ್ಕಿನಿಂದ ಎಷ್ಟು ಜನ ಇಸಿಸ್‌ಗೆ ಸೇರಿದ್ದಾರೆ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಸಾಕಷ್ಟು ಕಾಲವಕಾಶ ಬೇಕು. ಅದು ಸವಾಲಿನ ಕೆಲಸವೆಂದರು.
ಇಸಿಸ್ ನೇಮಕಕ್ಕೆ ಮೆಹ್ದಿಯೇ ಕನ್ಸಲ್ಟೆಂಟ್
ಶಮ್ಮಿ ವಿಟ್ನೆಸ್ ಅಕೌಂಟ್ ನಿರ್ವಹಣೆ ಮುಖ್ಯ ಉದ್ದೇಶ ಹೆಚ್ಚು ಹೆಚ್ಚು ಜನರನ್ನು ಇಸಿಸ್ ಸಂಘಟನೆಗೆ ಸೇರಿಸುವುದಾಗಿತ್ತು. ಹೀಗಾಗಿ ಮೆಹ್ದಿ, ಇರಾಕ್‌ನಲ್ಲಿನ ಉಗ್ರನಿಂದ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ತನ್ನ ಅಕೌಂಟ್ ಮೂಲಕ ಪಸರಿಸುತ್ತಿದ್ದ. ಇಸಿಸ್‌ಗೆ ಸೇರ್ಪಡೆ, ಅಲ್ಲಿನ ಕೆಲಸಗಳು, ಏನೆಲ್ಲ ಚಟುವಟಿಕೆಗಳು ನಡೆಯುತ್ತವೆ ಎನ್ನುವುದನ್ನು ತಿಳಿದುಕೊಂಡು ಟ್ವೀಟ್ ಮಾಡುತ್ತಿದ್ದ. ಅಲ್ಲದೇ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದ.
ಇಂಟರ್‌ಪೋಲ್ ನೆರವು ಕೋರಿಕೆ
ಇಸಿಸ್ ಸಂಘಟನೆ ಪರ ಟ್ವಿಟರ್ ಅಕೌಂಟ್ ಶಮ್ಮಿ ವಿಟ್ನೆಸ್ ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬಂಧಿತನಾದ ಮೆಹ್ದಿ ಬಂಧನದ ಬಳಿಕ ನಗರ ಪೊಲೀಸರ ಟ್ವಿಟರ್ ಅಕೌಂಟ್‌ಗೆ ಬೆದರಿಕೆ ಟ್ವೀಟ್‌ಗಳ ಬಂದಿದ್ದವು. ಇವುಗಳ ಮೂಲ ಪತ್ತೆಗೆ ಇಂಟರ್ ಪೋಲ್ ನೆರವು ಕೋರಲು ಪೊಲೀಸರು ನಿರ್ಧರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗೆ ಕೊಲೆ ಬೆದರಿಕೆಯೂ ಬಂದಿತ್ತು. ಅದನ್ನು ಗಂಭೀರವಾಗಿಯೂ ಪರಿಗಣಿಸುವಂತಿಲ್ಲ ಹಗುರವಾಗಿಯೂ ಪರಿಗಣಿಸುವಂತಿಲ್ಲ. ಆದರೆ ಟ್ವೀಟ್‌ವೊಂದು ಆಫ್ರಿಬಕಾದಿಂದ ಬಂದಿದೆ. ಹೀಗಾಗಿ ಅದರ ಮೂಲಕ ಪತ್ತೆಗೆ ಇಂಟರ್ ಪೋಲ್ ನೆರವು ಕೋರಿ ಪತ್ತೆ ಹಚ್ಚುವುದಾಗಿ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ತಿಳಿಸಿದರು.
ಮೆಹ್ದಿ ಜೈಲಿಗೆ
ಮೆಹ್ದಿಯನ್ನು ವಿಚಾರಣೆಗಾಗಿ 20 ದಿನಗಳ ಕಾಲ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿತು.
Advertisement