ಮತಾಂತರಕ್ಕೆ ಸಮಯ ನಿಗದಿಗೊಳಿಸಿ: ಭೈರಪ್ಪ

ಮದುವೆ ಮಾಡಿಕೊಳ್ಳಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೂವರೆ ತಿಂಗಳು ಮೊದಲೇ ಸಮಯ ನಿಗದಿಗೊಳಿಸುವಂತೆ ...
ಡಾ.ಎಸ್.ಎಲ್ ಭೈರಪ್ಪ
ಡಾ.ಎಸ್.ಎಲ್ ಭೈರಪ್ಪ
Updated on

ತುಮಕೂರು: ಮದುವೆ ಮಾಡಿಕೊಳ್ಳಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೂವರೆ ತಿಂಗಳು ಮೊದಲೇ  ಸಮಯ ನಿಗದಿಗೊಳಿಸುವಂತೆ ಸೂಚಿಸುವ ಸರ್ಕಾರ ಮತಾಂತರಕ್ಕೆ ನಿಗದಿಗೊಳಿಸುವುದರ ಜತೆಗೆ ದಾಖಲಿಸಲಿ ಎಂದು ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್ ಭೈರಪ್ಪ ಅಭಿಪ್ರಾಯಪಟ್ಟರು.

ತುಮಕೂರಿನಲ್ಲಿ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮತಾಂತರ ಕದ್ದು ಮುಚ್ಚಿ ನಡೆಯುತ್ತಿರುವುದು ಗೊತ್ತಿರುವ ಸಂಗತಿ. ಆಸೆ ಆಮಿಷಗಳನ್ನೊಡ್ಡಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ವ್ಯಾಟಿಕನ್ ಸಿಟಿಯಿಂದ ಕೋಟ್ಯಂತರ ರುಪಾಯಿ ಹಣ ಹರಿದು ಬರುತ್ತಿದೆ. ಇದು ಬಹಿರಂಗ ಸತ್ಯ. ಟ್ರಿಕ್ ಮಾಡಿ ಮತಾಂತರ ಮಾಡುತ್ತಿದ್ದಾರೆ. ಹಿಂದೂ ಧರ್ಮ, ದೇವರ ಬಗ್ಗೆ ಕೆಟ್ಟದಾಗಿ ಬೈದು, ಕೀಳರಿಮೆ ಮೂಡಿಸಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು.

ಆರ್ಥಿಕ ಸಮಸ್ಯೆ, ಅಸ್ಪೃಶ್ಯತೆ, ಸಾಮಾಜಿಕ ಸಮಸ್ಯೆಗಳೇ ಮತಾಂತರ ಕಾರಣವಲ್ಲವೆ?  ಹೀಗಿರುವಾಗ ಮತಾಂತರ ಬೇಡ ಎನ್ನುವುದು ಸರಿಯೇ ಎಂಬ ಪ್ರಶ್ನೆಗೆ , ಸರ್ಕಾರಗಳು ಇವುಗಳನ್ನು ನಿವಾರಿಸುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಅಸ್ಪೃಶ್ಯತೆ ಆಚರಣೆಯೂ ಇದೆ ಎಂಬುದನ್ನು ಮರೆಯಬಾರದು. ಮತಾಂತರ ತಪ್ಪಲ್ಲ ಅಂತಾದರೆ ಮರು ಮತಾಂತರವೂ ತಪ್ಪಲ್ಲ ಎಂದು ಸ್ಪಷ್ಟಪಡಿಸಿದರು.
ಜಾತಿ ಹೋಗಬೇಕು ಅಂತ ಹೇಳುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಘೋಷಣೆ ಕೂಗಿದಾಕ್ಷಣ ಈ ಜಾತಿ ಹೋಗಲ್ಲ. ಸಾಮಾಜಿಕ ಬದಲಾವಣೆ ನಡೆದಿದೆ. ಅಂತರ್ಜಾತಿ ವಿವಾಹಗಳನ್ನು ತಪ್ಪಿಸಲು ಸಾಧ್ಯವಿಲ್ಲ. ವಿದ್ಯಾಭ್ಯಾಸ, ನಗರೀಕರಣ, ಕೈಗಾರಿಕೀಕರಣದ ಫಲವಾಗಿ ಈ ಬದಲಾವಣೆ ನಡೆದಿದೆ. ಯವ್ವನೋತ್ಸಾಹದಲ್ಲಿರುವ, ಒಂದೆಡೆ ಕೆಲಸ ಮಾಡುವ ಹುಡುಗ, ಹುಡುಗಿಯರು ಜಾತಿ ನೋಡಲ್ಲ. ಪರಿಣಾಮ  ಅಂತರ್ಜಾತಿ ವಿವಾಹಗಳು ನಡೆದಿವೆ. ಇದು ಮುಂದೆ ಹೆಚ್ಚಾಗಬಹುದು. ಇವೆಲ್ಲಾ ವಿಶೇಷ ಎನ್ನಿಸಿಕೊಳ್ಳುವ ಕಾಲವೂ ದೂರವಿಲ್ಲ ಎಂದರು.

ಸಾಂಸ್ಕೃತಿಕ ನೀತಿ ಬೇಡ:
ರಾಜ್ಯ ಸರ್ಕಾರ ಸಾಂಸ್ಕೃತಿಕ ನೀತಿ ತರುವುದು ಬೇಡ. ಈ ನೀತಿ ಕಮ್ಯುನಿಸ್ಟ್ ರಾಷ್ಟ್ರದ, ಸಿದ್ಧಾಂತದ ಬಳುವಳಿ. ಅಮೆರಿಕ, ಇಂಗ್ಲೆಂಡ್‌ನಂತಹ ಪ್ರಜಾಪ್ರಭುತ್ವ ದೇಶಗಳಲ್ಲೂ ಸಾಂಸ್ಕೃತಿಕ ನೀತಿಯಿಲ್ಲ. ಸಾಹಿತ್ಯ, ಸಂಸ್ಕೃತಿ ಅಂತ ಸರ್ಕಾರ ತಲೆ ಹಾಕಿದರೆ ಕಂಟ್ರೋಲ್ ಮಾಡಿದಂಗಾಗುತ್ತೆ. ಸಾಹಿತಿ, ಕಲಾವಿದ ಸರ್ಕಾರದ  ಹಂಗಿಲ್ಲದೆ ಬದುಕಬೇಕು. ಮಹಾರಾಷ್ಟ್ರ ದಲ್ಲಿ ಸಾಹಿತ್ಯ ಪರಿಷತ್ ಸರ್ಕಾರದ ಹಂಗಿಲ್ಲದೆ ನಡೆಯುತ್ತಿದೆ. ಅಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಮಂತ್ರಿಗಳು, ಸರ್ಕಾರ ಲೆಕ್ಕಕ್ಕಿಲ್ಲ. ಬರುತ್ತಾರೆ. ಆದರೆ ವೇದಿಕೆ ಹತ್ತುವಂತಿಲ್ಲ . ಅದೇ ರೀತಿ ಕರ್ನಾಟಕದಲ್ಲೂ ಆದರೆ ಒಳ್ಳೆಯದು. ಪ್ರಜಾಪ್ರಭುತ್ವದಲ್ಲೂ ರಾಜ ಪ್ರಭುತ್ವ ಮುಂದುವರೆದಿದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಾಹಿತ್ಯ ಸಮ್ಮೇಳನವೇ ಸಾಕ್ಷಿ ಎಂದರು.

ಪ್ರೌಢಶಾಲೆವರೆಗೆ ಮಾತೃಭಾಷೆಯಲ್ಲಿರಲಿ: ಶಿಕ್ಷಣ ಮಾಧ್ಯಮ ಪ್ರೌಢಶಾಲೆವರೆಗೆ ಮಾತೃಭಾಷೆಯಲ್ಲಿರಬೇಕು. ಇದರಲ್ಲಿ ಯಾವುದೇ ರಾಜಿ ಬೇಡ. ಮಾತೃಭಾಷೆ ಉಳಿಯದೆ ಸಾಹಿತ್ಯ ಉಳಿಯಲು ಸಾಧ್ಯವಿಲ್ಲ. ಇಂಗ್ಲಿಷ್‌ನಲ್ಲಿ ಬರೆಯುವ ಪ್ರಥಮ ದರ್ಜೆ ಲೇಖಕರು ಭಾರತೀಯರಾರೂ ಇಲ್ಲ. ಏಕೆಂದರೆ ಇಂಗ್ಲಿಷ್ ನಮ್ಮ ಜೀವನದ ಭಾಷೆಯಲ್ಲ. ಜಾನಪದವೂ ಅಲ್ಲ ಎಂದ ಭೈರಪ್ಪ, ದೇವನೂರು ಮಹಾದೇವ ಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಒಪ್ಪದ ವಿಷಯ ಕುರಿತು ಮಾತಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಭೈರಪ್ಪ ಉತ್ತರಿಸಿದರು.

ರಾಷ್ಟ್ರಕವಿ ಆಯ್ಕೆ ಮಾನದಂಡದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಸಾಹಿತ್ಯದ ರೀತಿ-ನೀತಿ ನಿಮಗೆಲ್ಲಾ ಗೊತ್ತಿದೆ. ಎಷ್ಟು ವಿಷಯಗಳಿಗೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯ. ಹೀಗೆಲ್ಲಾ ಮಾಡುತ್ತಾ ಹೋದರೆ ನನ್ನ ಏಕಾಗ್ರತೆಗೆ ಭಂಗ ಬರುತ್ತೆ ಎಂದ ಅವರು, ಪದ್ಮಭೂಷಣ ಪ್ರಶಸ್ತಿ ಬಂದಿರೋ ಬಗ್ಗೆ ತಮಗೆ ಮಾಹಿತಿಯಿಲ್ಲ. ಇನ್ನು ಪ್ರತಿಕ್ರಿಯೆ ನೀಡಲು ಹೇಗೆ ಸಾಧ್ಯ ಎಂದು ಮರು ಪ್ರಶ್ನಿಸಿದರು.

ಮೋದಿ ಸರಿ ದಿಕ್ಕಿನಲ್ಲಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರಿದಿಕ್ಕಿನಲ್ಲಿ ನಡೆಯುತ್ತಿದೆ. ವಿದೇಶಾಂಗ ನೀತಿ ಸರಿಯಾಗಿದೆ. ಹಿಂದಿನ ಸರ್ಕಾರ ಮೋದಿಯವರ ಹಾಗೆ ನೀತಿ- ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆದರಿ ನಡುಗುತ್ತಿತ್ತು. ಆದರೆ ಮೋದಿ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಏಕಕಾಲದಲ್ಲಿ ಮಿತ್ರ ಜಪಾನ್, ಶತ್ರು ರಾಷ್ಟ್ರಗಳ ಪಟ್ಟಿಯಲ್ಲಿರುವ ಚೀನಾ ದೇಶಗಳೆರಡೂ ಭಾರತದಲ್ಲಿ ಬುಲೆಟ್ ಟ್ರೈನ್‌ಗಾಗಿ ಬಂಡವಾಳ ಹೂಡಲು ಮುಂದೆ ಬಂದಿರುವುದು ಮೋದಿಯವರ ಚಾಣಾಕ್ಷತೆಗೆ, ಧೈರ್ಯಕ್ಕೆ ಸಾಕ್ಷಿ. ಇತ್ತೀಚೆಗೆ  ಚೀನಾ ದೇಶ ಭಾರತದ ಗಡಿಯಲ್ಲಿ 10 ಸಾವಿರ ಸೈನಿಕರನ್ನು ಜಮಾವಣೆಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವೂ 10 ಸಾವಿರ ಸೈನಿಕರನ್ನು ಜಮಾವಣೆಗೊಳಿಸಿತ್ತು.  ಕೊನೆಗೆ ಚೀನಿಯರು ಬಿಳಿ ಬಾವುಟ ಹಾರಿಸುವುದರ ಮೂಲಕ, ಶಾಂತಿ ಮಂತ್ರ ಜಪಿಸಿದರು. ಇದಕ್ಕೆ ಮೋದಿಯವರ ಕಣ್ಣಿಗೆ ಕಣ್ಣು ನೀತಿಯೇ ಕಾರಣ, ಇವೆಲ್ಲಾ ಎಲ್ಲೂ ವರದಿಯಾಗಲ್ಲ ಎಂಬುದು ಗಮನಾರ್ಹ. ಒಟ್ಟಾರೆ ನರೇಂದ್ರ ಮೋದಿ ಸಮರ್ಥ ಪ್ರಧಾನಿ ಎಂದು ಶ್ಲಾಘಿಸಿದರು.

"ಅಂತರ್ಜಾತಿ ಬ್ರಾಹ್ಮಣ ವಿವಾಹಿತರು ಬ್ರಾಹ್ಮಣ್ಯವನ್ನು ಕಡ್ಡಾಯವಾಗಿ ಆಚರಿಸುವುದರ ಮೂಲಕ ಬ್ರಾಹ್ಮಣ ಸಂಸ್ಕೃತಿ ಕಾಪಾಡಬೇಕು. ಆ ಮೂಲಕ ಹಿಂದೂ ಧರ್ಮದ ಉಳಿವಿಗೆ ಕಂಕಣ ತೊಡಬೇಕು. ಹಿಂದೂ ಧರ್ಮದಲ್ಲಿನ ಯಾವುದೇ ಜಾತಿಯ ಜೊತೆ ವಿವಾಹ ನಿಷಿದ್ಧವಲ್ಲ. ಆದರೆ ವಿವಾಹ ನಂತರ ಅವರಿಗೆ ಬ್ರಾಹ್ಮಣ ಸಂಸ್ಕೃತಿಯಂತೆ ನಡೆದುಕೊಳ್ಳುವುದನ್ನು ಕಡ್ಡಾಯವಾಗಿ ಕಲಿಸಬೇಕು. ದಿನ ಕಳೆದಂತೆ ಬದಲಾವಣೆಗಳಾಗುತ್ತಿವೆ. ಆ ಬದಲಾವಣೆಗೆ ಬ್ರಾಹ್ಮಣರು ಹೊಂದಿಕೊಳ್ಳದೇ ಇದ್ದಲ್ಲಿ ಬದುಕುವುದು ಕಷ್ಟವಾಗುತ್ತದೆ. ಬ್ರಾಹ್ಮಣೇತರರ ಜೊತೆಯಲ್ಲಿ ವಿವಾಹವನ್ನು ವಿರೋಧಿಸುವುದು ಬೇಡ. ಆದರೆ ಅನ್ಯ ಧರ್ಮಿಯರ ಜೊತೆಯಲ್ಲಿ ವಿವಾಹ ಸಂಬಂಧ ಬೇಡ."

-ಡಾ.ಎಸ್.ಎಲ್ ಭೈರಪ್ಪ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com