ರಾಜ್ಯ ಸರ್ಕಾರಿ ಕಾಲೇಜು ತರಗತಿಗಳಿನ್ನು ಸ್ಮಾರ್ಟ್‌

ರಾಜ್ಯ ಸರ್ಕಾರದ ಎಲ್ಲ 411 ಪದವಿ ಕಾಲೇಜುಗಳಲ್ಲಿ ಮಾ. 31ರೊಳಗೆ ಸ್ಮಾರ್ಟ್ ಹಾಗೂ ವರ್ಚ್ಯುಯಲ್ ತರಗತಿ ಆರಂಭವಾಗಲಿದೆ.
ಪದವಿ ಕಾಲೇಜು
ಪದವಿ ಕಾಲೇಜು

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ 411 ಪದವಿ ಕಾಲೇಜುಗಳಲ್ಲಿ ಮಾ. 31ರೊಳಗೆ ಸ್ಮಾರ್ಟ್ ಹಾಗೂ ವರ್ಚ್ಯುಯಲ್ ತರಗತಿ ಆರಂಭವಾಗಲಿದೆ.

ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವವರಿಗೂ ಆಧುನಿಕ ತಂತ್ರಜ್ಞಾನದ ನೆರವು ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಆರಂಭಿಸಿದೆ. ಮೊದಲ ಹಂತದಲ್ಲಿ 50 ಕಾಲೇಜುಗಳಲ್ಲಿ ಸ್ಮಾರ್ಟ್ ಹಾಗೂ ವರ್ಚ್ಯುವಲ್ ತರಗತಿ ಆರಂಭಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯದ ಮೊದಲ ಸ್ಮಾರ್ಟ್ ತರಗತಿಗೆ ಶುಕ್ರವಾರ ಚಾಲನೆ ನೀಡಿದ ಅವರು, ಎಚುಸ್ಯಾಟ್, ಟೆಲಿ ಎಜುಕೇಷನ್ ಹಾಗೂ ಸ್ಮಾರ್ಟ್ ತರಗತಿಯಂತಹ ಯೋಜನಗಳು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸುತ್ತವೆ. ಪ್ರಾಧ್ಯಾಪಕರ ಕೊರತೆ ಇರುವಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್‌ಗಳು ನೆರವಾಗಲಿವೆ ಎಂದರು.

ಬೇಸರ ತರಿಸುತ್ತದೆ: ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಜೀವನ ನಿರ್ಮಿಸುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿರುತ್ತದೆ. ರಾಷ್ಟ್ರ ಕಟ್ಟುವ ಕಾರ್ಯ ಮಾಡುತ್ತಿರುವಾಗ, ಕೆಲಸದ ಅವಧಿ 6-8 ಗಂಟೆಗೆ ವಿಸ್ತರಣೆಯಾದಾಗ ವಿರೋಧಿಸುವುದು ಬೇಸರ ತರಿಸುತ್ತದೆ ಎಂದು ಸಚಿವ ದೇಶಪಾಂಡೆ ಹೇಳಿದರು.

ಬುದ್ಧಿವಂತರಲ್ಲ!
ನಾವು ರಾಜಕಾರಣಿಗಳು ಜಾಣರಲ್ಲ, ಆ ವಿಚಾರ ನಿಮಗೆ ಗೊತ್ತಲ್ವಾ? ಎಂದು ಸಚಿವ ಆರ್.ವಿ ದೇಶಪಾಂಡೆ ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಉತ್ತರ ಬಯಸಿದರು. ಆದರೆ, ವಿದ್ಯಾರ್ಥಿಗಳು ಉತ್ತರ ನೀಡುವ ಬದಲು ಕೇವಲ ನಗೆಬೀರಿ ಸುಮ್ಮನಾದರು. ಪ್ರಶ್ನೆಗೆ ತಾವೇ ಉತ್ತರಿಸಿದ ಸಚಿವರು, ನಾವು ಜಾಣರಲ್ಲ ಎನ್ನುವುದಕ್ಕಾಗಿ ಶಿಕ್ಷಣದ ಗುಣಮಟ್ಟ ವೃದ್ಧಿಗೆ ಕಸ್ತೂರಿರಂಗನ್‌ರಂಥ ಜ್ಞಾನಿಗಳನ್ನು ಕರ್ನಾಟಕ ಜ್ಞಾನ ಆಯೋಗಕ್ಕೆ ತಂದು ಕೂರಿಸಲಾಗಿದೆ. ಅವರ ಸಲಹೆಗಳನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದರು.

ನಿಮ್ಮ ಪ್ರಶ್ನೆ ನಾವೇ ಕೇಳ್ಕೊಂಡಿದ್ದು?
ಏನಿದು ಹೊಸ ತರಗತಿ?
ರಾಜ್ಯದ ಎಲ್ಲ ಕಾಲೇಜುಗಳು ತಮ್ಮದೇ ಆದ ಅಂತರ್ಜಾಲ ತಾಣ ಹೊಂದಲಿವೆ. ಜತೆಗೆ ಒಂದು ಸ್ಮಾರ್ಟ್ ಹಾಗೂ ವರ್ಚ್ಯುಯಲ್ ತರಗತಿಯನ್ನು ನಿರ್ಮಿಸಲಾಗುವುದು.

ಏನು ಲಾಭ?
ಆಯ್ದ ವಿಷಯಗಳ ಸುಮಾರು 500 ತರಗತಿಗಳ ವಿಡಿಯೋ ಚಿತ್ರೀಕರಣ ಇಲ್ಲಿ ಲಭ್ಯವಿರುತ್ತದೆ. ಉನ್ನತ ಶಿಕ್ಷಣ ಇಲಾಖೆಯ ಎಜುಸ್ಯಾಟ್ ಲ್ಯಾಬ್‌ನಲ್ಲಿಯೇ ಚಿತ್ರೀಕರಣ ನಡೆಯುತ್ತದೆ.

ಹೇಗೆ ಲಭ್ಯ? ಇದಕ್ಕಾಗಿಯೇ ನೀಡುವ ಪ್ರತ್ಯೇಕ ಅಪ್ಲಿಕೇಷನ್, ಲ್ಯಾನ್ ಮೂಲಕ ವಿಡಿಯೋಗಳನ್ನು ವಿದ್ಯಾರ್ಥಿಗಳು ನೋಡಬಹುದಾಗಿದೆ. ಜತೆಗೆ ಕಾಲೇಜು ವ್ಯಾಪ್ತಿಯಲ್ಲಿ ವೈಫೈ ಸೌಲಭ್ಯವನ್ನು ನೀಡಲಾಗುತ್ತದೆ.

ಪುಸ್ತಕವೇ ಬೇಡವೇ?
ಹಾಗೇನಿಲ್ಲ, ಇದು ಸಾಮಾನ್ಯ ಕಲಿಕೆಗೆ ಪರ್ಯಾಯವಲ್ಲದಿದ್ದರೂ ಹೆಚ್ಚುವರಿ ಪಠ್ಯಾಂಶವಾಗಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com