ಆಟೋಗಿಂತ ಕ್ಯಾಬ್ ವಾಸಿ

ಆಟೋ ಪ್ರಯಾಣ ದರ ಪ್ರಯಾಣಿಕರ ಜೇಬಿಗೆ ಹೊರೆಯಾಗುತ್ತಿದೆ ವಿನಾಃ ಪ್ರಯಾಣಿಕರ ಅನುಕೂಲಕ್ಕಾಗಿ ದರ ಇಳಿಕೆ ಬಗ್ಗೆ ಎಲ್ಲೂ ಮಾತುಗಳು ಕೇಳಿಬರುತ್ತಿಲ್ಲ.
ಆಟೋ(ಸಾಂದರ್ಭಿಕ ಚಿತ್ರ)
ಆಟೋ(ಸಾಂದರ್ಭಿಕ ಚಿತ್ರ)

ಆಟೋ ಪ್ರಯಾಣ ದರ ಪ್ರಯಾಣಿಕರ ಜೇಬಿಗೆ ಹೊರೆಯಾಗುತ್ತಿದೆ ವಿನಾಃ ಪ್ರಯಾಣಿಕರ ಅನುಕೂಲಕ್ಕಾಗಿ ದರ ಇಳಿಕೆ ಬಗ್ಗೆ ಎಲ್ಲೂ ಮಾತುಗಳು ಕೇಳಿಬರುತ್ತಿಲ್ಲ.

ಪೆಟ್ರೋಲ್, ಡೀಸಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆದರೆ ಪ್ರಯಾಣಿಕರಿಗೆ ಸುಲಭವಾಗಿ ಸಿಗುವಂತಾ ಆಟೋ ದರ ಮಾತ್ರ ಇಂದಿಗೂ ದುಬಾರಿಯಾಗೆ ಉಳಿದಿದೆ. ಆದರೆ ಇದರ ವಿರುದ್ಧ ಸಾರ್ವಜನಿಕರು ಮಾತ್ರ ಧನಿ ಎತ್ತುತ್ತಿಲ್ಲ. ನಗರದ ಗಲ್ಲಿಗಲ್ಲಿಗೂ ಹೋಗಬೇಕಾದರೆ ಆಟೋಗಳ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ಪ್ರಯಾಣಿಕರು ಸಹ ಆಟೋಗಳ ಮೊರೆ ಹೋಗುತ್ತಾರೆ. ಅಂತ ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರಿಗೆ ಸ್ನೇಹಿಯಾಗಿರುವ ಆಟೋಗಳ ಪ್ರಯಾಣ ದರ ಇಳಿಕೆ ಮಾತ್ರ ಗಗನ ಕುಸುಮವಾಗಿದೆ.

ಪೆಟ್ರೋಲ್‌ನಂತೆ ಡೀಸೆಲ್ ಬೆಲೆಯಲ್ಲೂ ಬಾರಿ ಇಳಿಕೆ ಕಂಡಿತು. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಇಳಿಕೆ ಮಾಡುವಂತೆ ಪ್ರತಿಭಟನೆಗಳು ನಡೆದಿದ್ದರಿಂದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿ ತನ್ನ ಕೈತೊಳೆದುಕೊಂಡಿತ್ತು. ಎಲ್ಲಾ ಸಮಯದಲ್ಲಿ ಪ್ರಯಾಣಿಕನು ಬಸ್‌ಗಳನ್ನೇ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಆಟೋಗಳನ್ನೇ ಅವಲಂಭಿಸಬೇಕಾಗುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಕಳೆದ 6 ತಿಂಗಳೊಳಗೆ ಪೆಟ್ರೋಲ್ ಬೆಲೆಯಲ್ಲಿ ಬರೋಬ್ಬರಿ 14 ರುಪಾಯಿಯಷ್ಟು ಇಳಿಯಾಗಿದೆ. ಆದರೆ ಆಟೋಗಳ ಪ್ರಯಾಣ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಸದ್ಯದ ಬದಲಾವಣೆಯಲ್ಲಿ ನಗರದಲ್ಲಿನ ಆಟೋಗಳಿಗಿಂತ ಟ್ಯಾಕ್ಸಿ ಪ್ರಯಾಣ ದರವೇ ಕಡಿಮೆ ಇದೆ.

ಕಳೆದ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕಳೆದುಕೊಂಡಿದ್ದರಿಂದ ಪೆಟ್ರೋಲ್ ದರ ಏರಿಕೆ ಅವಶ್ಯಕವಾಗಿತ್ತು. ಪೆಟ್ರೋಲ್ ಹಾಗೂ ಗ್ಯಾಸ್ ದರ ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಚಾಲಕರು ಆಟೋ ಪ್ರಯಾಣ ದರವನ್ನು ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಅದರಂತೆ ಡಿಸೆಂಬರ್ 20 ರಂದು ಜಿಲ್ಲಾಧಿಕಾರಿ ಡಾ.ಜಿ.ಸಿ ಪ್ರಕಾಶ ಅವರು ನಿಗದಿತ ಪರಿಷ್ಕೃತ ದರ ಜಾರಿಗೊಳಿಸಿದ್ದರು. ಅಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 77. 84 ರುಪಾಯಿಯಷ್ಟಿತ್ತು. ಹೀಗಾಗಿ ಆಟೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ ಅಂದು ಇದ್ದ ಪರಿಸ್ಥಿತಿ ಇಂದು ಸುಧಾರಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 64. 72 ರುಪಾಯಿಯಷ್ಟಿದೆ. ಅಂದರೆ ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್‌ನಲ್ಲಿ ಸರಿ ಸುಮಾರು 13 ರುಪಾಯಿ ಕಡಿಮೆಯಾಗಿದೆ. ಆದರೆ ಆಟೋ ಪ್ರಯಾಣ ದರವನ್ನು ಇಳಿಕೆಗೆ ಯಾರು ಆಸಕ್ತಿ ತೋರುತ್ತಿಲ್ಲ ಎಂಬುದೇ ಸೋಜಿಗವಾಗಿದೆ.

ಆಟೋಗಿಂತ ಕ್ಯಾಬ್ ದರ ಕಡಿಮೆ
ಇಂದು ಆಟೋ ದರಕ್ಕಿಂತ ಕ್ಯಾಬ್‌ಗಳ ದರ ಕಡಿಮೆ ಇದೆ. ಬಹುತೇಕ ಆಟೋ ರಿಕ್ಷಾಗಳಿಗೆ ತಗಲುವ ವೆಚ್ಚದಲ್ಲಿಯೇ ಕಾರಿನಲ್ಲಿ ಆರಾಮವಾಗಿ ಈಗ ಹೋಗಬಹುದಾಗಿದೆ. ಕೇವಲ ಒಂದು ಫೋನ್ ಕರೆ ಮಾಡಿದರೆ ಸಾಕು, ಗ್ರಾಹಕರಿದ್ದಲ್ಲಿಗೆ ಕ್ಯಾಬ್ ಬರುತ್ತದೆ. ಟ್ಯಾಕ್ಸಿ ಕ್ಯಾಬ್ನಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಒಂದೇ ರೀತಿಯ ದರವಿದೆ. ಉಬರ್, ಒಲಾಕ್ಯಾಬ್ಸ್, ಟ್ಯಾಕ್ಸಿ ಪಾರ್ ಶೂರ್‌ನಂತ ಹೊಸ ಕಂಪನಿಗಳ ಕ್ಯಾಬ್ ನಲ್ಲಿ ಪ್ರತಿ ಕಿ.ಮೀ 10 ರುಪಾಯಿಗೆ ಪ್ರಯಾಣಿಸಬಹುದಾಗಿದೆ.

ಆಟೋ ದರ
ಮೊದಲ 2 ಕಿ.ಮೀ ಆಟೋ ಪ್ರಯಾಣ ದರ(ಮೂವರು ಪ್ರಯಾಣಿಕರಿಗೆ) 25 ರುಪಾಯಿ ಇದೆ. ನಂತರದ ಪ್ರತಿ ಕಿ.ಮೀಗೆ 13 ರುಪಾಯಿ. ಇದರ ನಡುವೆ ಕಾಯುವ ದರ ಮೊದಲ 5 ನಿಮಿಷ ಉಚಿತವಾಗಿದ್ದು, 5 ನಿಮಿಷ ಬಳಿಕ 5 ರುಪಾಯಿಗಿದೆ. ಇದೇ ರೀತಿ ಲಗೇಜು ದರದಲ್ಲೂ 20 ಕೆಜಿಗಿಂತ ಹೆಚ್ಚಿದ್ದರೆ 2 ರುಪಾಯಿ ದರ ನಿಗದಿ ಪಡಿಸಲಾಗಿತ್ತು. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಸಾಮಾನ್ಯ ದರಕ್ಕಿಂತ ಅರ್ಧಪಟ್ಟು ಹೆಚ್ಚಿಗೆ ದರವನ್ನು ಪ್ರಯಾಣಿಕ ನೀಡಬೇಕಿದೆ.

ಪೆಟ್ರೋಲ್ ದರ ಏರಿಕೆಯಾದಾಗ ಆಟೋ ಚಾಲಕರು ಪ್ರಯಾಣ ದರ ಏರಿಕೆ ಮಾಡುವಂತೆ ಪ್ರತಿಭಟನೆ ನಡೆಸಿದ್ರು. ಇಂದು ಪೆಟ್ರೋಲ್ ಕಡಿಮೆಯಾಗಿದ್ದರು. ಆಟೋ ದರ ಕಡಿಮೆಯಾಗಿಲ್ಲ - ಜವರೇಗೌಡ, (ಪ್ರಯಾಣಿಕ)

ಸದ್ಯದ ಪರಿಸ್ಥಿತಿಯಲ್ಲಿ ಆಟೋಗಳು ಇದ್ರು ಒಂದೆ ಅನ್ನುವಂತಾಗಿದೆ. ಪ್ರಯಾಣಿಕರ ಅಗತ್ಯತೆಗೆ ಸ್ಪಂಧಿಸುವ ಮನಸ್ಥಿತಿಯನ್ನು ಆಟೋ ಚಾಲಕರು ಕಳೆದುಕೊಂಡಿದ್ದಾರೆ - ಸುರೇಶ್(ಪ್ರಯಾಣಿಕ)


- ಎಸ್. ವಿಶ್ವನಾಥ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com