ಕೆಪಿಎಸ್‌ಸಿ: ಆರೋಪಗಳ ವಿರುದ್ಧ ಸು'ದರ್ಶನ'

ಒಂದೂ ಕಪ್ಪು ಚುಕ್ಕೆ ಇಲ್ಲದಂತೆ 25-30 ವರ್ಷ ಶುದ್ಧ ರಾಜಕೀಯ ಜೀವನ ನಡೆಸಿದ ವ್ಯಕ್ತಿಗೆ ಅಧಿಕಾರದ ಹುದ್ದೆ ಸಿಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅವರ ಮೇಲೆ ಕೆಸರೆರಚುವುದು ಎಷ್ಟು ಸರಿ?
ವಿ.ಆರ್ ಸುದರ್ಶನ್
ವಿ.ಆರ್ ಸುದರ್ಶನ್

ಬೆಂಗಳೂರು: ಒಂದೂ ಕಪ್ಪು ಚುಕ್ಕೆ ಇಲ್ಲದಂತೆ 25-30 ವರ್ಷ ಶುದ್ಧ ರಾಜಕೀಯ ಜೀವನ ನಡೆಸಿದ ವ್ಯಕ್ತಿಗೆ ಅಧಿಕಾರದ ಹುದ್ದೆ ಸಿಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅವರ ಮೇಲೆ ಕೆಸರೆರಚುವುದು ಎಷ್ಟು ಸರಿ? ಆ ವ್ಯಕ್ತಿಯ ಅಷ್ಟು ವರ್ಷಗಳ ಪ್ರಾಮಾಣಿಕತನಕ್ಕೆ ಅವರ ಸ್ವಚ್ಛ ವ್ಯಕ್ತಿತ್ವಕ್ಕೆ ಯಾವುದೇ ಬೆಲೆ ಇಲ್ಲವೇ?

ಯಾವುದೇ ವ್ಯಕ್ತಿ, ಯಾವುದೇ ಹುದ್ದೆಗೆ ನೇಮಕಗೊಳ್ಳುತ್ತಾರೆ ಎನ್ನುತ್ತಿದ್ದಂತೆ ಆತನ ವಿರುದ್ಧ ದೂರು, ಆರೋಪಗಳು ಆರಂಭವಾಗುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ಅವರು ಅಧಿಕಾರದಿಂದ ಇಳಿದ ನಂತರ ಅಥವಾ ಮೊದಲು ಅಂತಹ ಆರೋಪಗಳ ಸದ್ದಿರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ವಿ.ಆರ್. ಸುದರ್ಶನ್ ಅವರು ಮೇಲಿನ ಆರೋಪಗಳು. ಕೆಪಿಎಸ್ಸಿ ಅಧ್ಯಕ್ಷರ ಹುದ್ದೆಗೆ ಸರ್ಕಾರ ಅವರ ಹೆಸರನ್ನು ಶಿಫಾರಸು ಮಾಡಿದೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಅವರ ಮೇಲೆ ಆರೋಪಗಳ ಸುರಿಮಳೆ ಆರಂಭಗೊಂಡಿದೆ.

ಇದಕ್ಕಿಂತ ಮೊದಲು ಸರಳ, ಸಜ್ಜನ ರಾಜಕಾರಣಿಗಳ ಪಟ್ಟಿಯಲ್ಲಿ ವಿ. ಆರ್ ಸುದರ್ಶನ್ ಹೆಸರಿತ್ತು. ಕೆಪಿಎಸ್ಸಿ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಅವರನ್ನು ಮಹಾನ್‌ಭ್ರಷ್ಟ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಪ್ರಾಮಾಣಿಕ, ಸಜ್ಜನ ಎನಿಸಿಕೊಂಡಿದ್ದ ವ್ಯಕ್ತಿ ಬೆಳಗಾಗುವಷ್ಟರದಲ್ಲಿ ಭ್ರಷ್ಟನಾಗಿಬಿಡುವುದು ಸಾಧ್ಯವೇ? ಹಾಗಿದ್ದರೆ ಅವರ ಮೇಲೆ ಮಾಡಿದ ಆರೋಪಗಳು ಮೊದಲು ಏಕೆ ಕೇಳಿಬರಲಿಲ್ಲ? ಅವರು ಅವ್ಯವಹಾರ ಮಾಡಿದ್ದು ನಿಜವೇ? ಅವರ ಮೇಲೆ ಮಾಡಿರುವ ಆರೋಪಗಳು ಎಷ್ಟು ಸತ್ಯ? ಇದಕ್ಕೆ ಉತ್ತರ ಹುಡುಕಿ ಹೊರಟರೆ ಸಿಕ್ಕ ಉತ್ತರ ಆಘಾತಕಾರಿಯಾಗಿತ್ತು. ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನೂ ಜನರ ಮುಂದೆ ಖಳನಾಯಕನಂತೆ ಹೇಗೆಲ್ಲ ಬಿಂಬಿಸುತ್ತಾರೆ ಎಂಬುದು ನಿಚ್ಚಳವಾಗಿ ಗೋಚಿರಿಸಿತು. ವಿ.ಆರ್ ಸುದರ್ಶನ್ ಕೆಪಿಎಸ್ಸಿ ಅಧ್ಯಕ್ಷರಾಗುತ್ತಾರೋ ಇಲ್ಲವೋ ಎಂಬುದು ಸರ್ಕಾರ, ರಾಜ್ಯಪಾಲರು, ಕಾನೂನು ವ್ಯಾಪ್ತಿಗೆ ಬಿಟ್ಟ ವಿಚಾರ. ಆದರೆ ಅದೊಂದೇ ಕಾರಣಕ್ಕೆ ಅವರ ಸ್ಪಚ್ಛ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮಸಿಬಳಿದು, ಇಷ್ಟು ವರ್ಷಗಳ ಅವರ ಶ್ರಮವನ್ನು ನಿವಾಳಿಸಿ ಹಾಕಿಬಿಡುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ಪ್ರಾಮಾಣಿಕರಾಗಿರಬೇಕು ಎಂದು ಬಯಸುವವರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುವ ಅಪಾಯವಿದೆ. ವಿ.ಆರ್ ಸುದರ್ಶನ್ ಮೇಲೆ ಮಾಡಿರುವ ಆರೋಪಗಳಿಗೆ ಜನರ ಪರವಾಗಿ ಉತ್ತರಕಂಡುಕೊಲ್ಳುವ ಪ್ರಯತ್ನ ಇಲ್ಲಿದೆ. ನಿರ್ಧಾರ ನಿಮ್ಮದು.

ಆರೋಪ ಸತ್ಯ-ಮಿಥ್ಯ
ಆರೋಪ 1: ಕೋಲಾರ ಜಿಲ್ಲೆ ವೇಮಗಲ್‌ನಲ್ಲಿ(ಸರ್ವೇ ನಂಬರ್ 214) ವಿ.ಆರ್. ಸುದರ್ಶನ್ ಅವರು 10 ಗುಂಟೆ ಜಾಗ ಅತಿಕ್ರಮಣ ಮಾಡಿದ್ದಾರೆ.
ಸತ್ಯ:
ಈ ಜಾಗ 10 ಗುಂಟೆ ಇಲ್ಲ. ಎರಡು ಕಡೆ ರಸ್ತೆಗಾಗಿ ಜಾಗ ಬಿಟ್ಟು ಇರುವುದು 8 ಗುಂಟೆ. ಇದು 1923ರಿಂದಲೂ ಹಿಡುವಳಿ ಜಮೀನು. 1935ರಲ್ಲಿ ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಪೋಡಿಯೂ ಆಗಿದೆ. ಸ್ವಾತಂತ್ರ್ಯಾ ನಂತರ ಅಂದರೆ 1970-71ರಲ್ಲಿ ಪಹಣಿಯಲ್ಲೂ ಸುದರ್ಶನ್ ಅವರ ತಂದೆಯವರ ಹೆಸರು ದಾಖಲಾಗಿದೆ. 1973-74ರಲ್ಲಿ ಭೂ ಪರಿವರ್ತನೆಯೂ ಆಗಿದೆ. ತಂದೆ ತೀರಿಕೊಂಡ ನಂತರ ಪಿತ್ರಾರ್ಜೀತ ಆಸ್ತಿಯ ರೂಪದಲ್ಲಿ ಅದು ಸುದರ್ಶನ್ ಅವರ ಹೆಸರಿಗೆ ಬಂದಿದೆ. ಇಷ್ಟಾದ ಮೇಲೆ 45 ವರ್ಷಗಳ ನಂತರ ಆ ಜಾಗ ಅತಿಕ್ರಮಣ ಎಂದು ಆರೋಪ ಮಾಡಿದರೆ ಎನೆನ್ನಬೇಕು?
ಈವರೆಗೆ ಗ್ರಾಮದವರು ತಕರಾರು ಮಾಡಿಲ್ಲ. ಗ್ರಾಮ ಪಂಚಾಯತ್, ತಹಸೀಲ್ದಾರ್, ಜಿಲ್ಲಾಧಿಕಾರಿ ಒಬ್ಬರೂ ಒಂದು ನೋಟಿಸ್ ನೀಡಿಲ್ಲ. ಈಗ ಜಾಗ ಸುದರ್ಶನ್ ಅವರ ಹೆಸರಿನಲ್ಲೂ ಇಲ್ಲ. ಅದು ಕುಟುಂಬದಲ್ಲಾದ ಒಡಂಬಡಿಕೆಯಂತೆ ಸಹೋದರನ ಪುತ್ರನ ಹೆಸರಿನಲ್ಲಿದೆ. ಅಲ್ಲಿ ಕಟ್ಟಡ ಕಟ್ಟಲು ಗ್ರಾಮಪಂಚಾಯತ್ ಅನುಮತಿ ಕೊಟ್ಟಿದೆ. ಬ್ಯಾಂಕಿನವರು ಸಾಲವನ್ನೂ ಕೊಟ್ಟಿದ್ದಾರೆ. ದಾಖಲೆಗಳು ಸರಿ ಇಲ್ಲದೆ ಇಷ್ಟೆಲ್ಲ ಆಗಲು ಸಾಧ್ಯವೇ? ಈಗ ಇದರ ವಿರುದ್ಧ ಯಾವುದೋ ಊರಿನವರು ದೂರು ಸಲ್ಲಿಸುವುದರ ಹಿಂದಿನ ಉದ್ದೇಶ ಇಂದಿಗೂ ನಿಗೂಢ.

ಆರೋಪ 2: ಬೆಂಗಳೂರಿನ ಗೃಹ ನಿರ್ಮಾಣಮಂಡಳಿಯೊಂದರಲ್ಲಿ ಸೈಟ್ ಇದ್ದರೂ ಬಿಡಿಎ ಸೈಟ್ ಪಡೆಯುವಾಗ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಸತ್ಯ: ಬಹುತೇಕ ಜನಪ್ರತಿನಿಧಿಗಳಿಗೆ, ಪತ್ರಕರ್ತರಿಗೆ, ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ ದೊರೆತಂತೆ ವಿ.ಆರ್ ಸುರ್ದಶನ್ ಅವರಿಗೂ ಸರ್ಕಾರ ಜಿ ಕೆಟಗಿರಿ ಸೈಡ್ ಮಂಜೂರು ಮಾಡಿತ್ತು. ಇದು ಪುಕ್ಕಟೆ ಸೈಟಲ್ಲ. ಇದಕ್ಕೆ ರು. 8.5 ಲಕ್ಷ ಹಣ ಪಾವತಿಸಿದ್ದಾರೆ. ಈ ಸೈಟ್ ಪಡೆಯುವಾಗ 2001 ರಲ್ಲಿ ವಿ.ಆರ್ ಸುದರ್ಶನ್ ಬೆಂಗಳೂರಿನಲ್ಲಿ ಯಾವುದೇ ಸೈಟ್ ಇಲ್ಲ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದರು. ಆದರೆ ಅವರಿಗೆ ಕೊಡಿಗೆಹಳ್ಳಿಯಲ್ಲಿ ಸೈಟ್ ಇದೆ. ಆದ್ದರಿಂದ ಅವರು ಸುಳ್ಳು ಹೇಳಿದ್ದಾರೆ ಎಂಬುದು ಆರೋಪ.
ಆದರೆ ಕೊಡಿಗೇಹಳ್ಳಿಯಲ್ಲಿ ಸುದರ್ಶನ್ ಅವರ ಮಗನಿಗೆ ಸೈಟ್ ದೊರೆತಿದ್ದು 2011ರಲ್ಲಿ. ಸುದರ್ಶನ್ ಅವರ ಪತ್ನಿ ಪುಶ್ಪಾ ಕೊಡಿಗೇಹಳ್ಳಿಯಲ್ಲಿ ಎನ್‌ಐಟಿ ಗೃಹ ನಿರ್ಮಾಣ ಮಂಡಳಿ ಸದಸ್ಯರಾಗಿದ್ದರು. ಆ ಸಂಘದವರು ಪುಷ್ಪಾ ಅವರಿಗೆ 1997ರ ಮಾ. 10ರಂದು ಒಂದು ಸೈಟ್ ಮಂಜೂರು ಮಾಡಿದ್ದರು. ಆದರೆ ಆ ಸಂಪೂರ್ಣ ಬಡಾವಣೆಗೆ ನ್ಯಾಯಾಲಯದ ತಡೆಯಾಜ್ಞೆ ಇತ್ತು. ಈ ಜಾಗ ಆಗಿನ್ನೂ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿರಲಿಲ್ಲ. ಸ್ಥಳೀಯ ಯಾವುದೇ ಸಂಸ್ಥೆ ಅಥವಾ ಪ್ರಾಧಿಕಾರ ಈ ಬಡಾವಣೆಗೆ ಅನುಮತಿ ಕೂಡ ನೀಡಿರಲಿಲ್ಲ. ಆದ್ದರಿಂದ 1997ರಲ್ಲಿ ಪುಷ್ಪಾ ಅವರ ಹೆಸರಿಗೆ ಸಂಘದಿಂದ ಒಂದು ಸೈಟ್ ಮಂಜೂರಾದರೂ ಅದು ಪುಷ್ಪಾ ಅವರ ಹೆಸರಿಗೆ ದಾಖಲಾಗಲಿಲ್ಲ ಅಥವಾ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ನ್ಯಾಯಾಲಯದ ತೀರ್ಮಾನದ ಮೇಲೆ ಈ ಸೈಟ್‌ನ ಖರೀದಿ ನಿಂತಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ಅಂತ್ಯಗೊಂಡಿದ್ದು 2010ರಲ್ಲಿ. ಅಷ್ಟರಲ್ಲಿ ಸುದರ್ಶನ್ ಅವರು ಬಿಡಿಎ ಸೈಟ್ ಖರೀದಿಸಿ. ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಸರ್ಕಾರದಿಂದ ಅನುಮತಿಯನ್ನೂ ಪಡೆದಾಗಿತ್ತು. 2010ರಲ್ಲಿಯೇ ಬಿಡಿಎ ಈ ಬಡಾವಣೆಗೆ ಅನುಮತಿಯನ್ನೂ ನೀಡಿತ್ತು. ಅಷ್ಟರಲ್ಲಿ ಪತ್ನಿ ಪುಷ್ಪಾ ಅವರು ನಿಧನರಾಗಿದ್ದರಿಂದ 2011ರ ಫೆ.18ರಂದು ಮಗನ ಹೆಸರಿಗೆ ಸೈಟ್ ರಿಜಿಸ್ಟರ್ ಮಾಡಿಸಲಾಗಿದೆ. ಹೀಗಿರುವಾಗ ಬಿಡಿಎಗೆ ನೀಡಿದ ಪ್ರಮಾಣಪತ್ರದಲ್ಲಿ ಸುಳ್ಳು ಹೇಳಿದ್ದಾರೆ ಎಂಬುದು ಎಷ್ಟು ಸರಿ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com