
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಪುಶ್ಚಿಮ ಬಂಗಾಳ ಮೂಲದ ಮೆಹ್ದಿ ಮಸ್ರೂರ್ ಬಿಸ್ವಾಸ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವಷ್ಟು ಸಾಕ್ಷಿಗಳು ಲಭ್ಯವಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದರು.
ಮೆಹ್ದಿ ಮಸ್ರೂರ್ ನಿರ್ವಹಿಸುತ್ತಿದ್ದ ಶಮ್ಮಿ ವಿಟ್ನೆಸ್ ಖಾತೆಯಲ್ಲಿನ 1.24 ಲಕ್ಷ ಟ್ವೀಟ್‍ಗಳ ಪರಿಶೀಲನೆ, ವಿಶ್ಲೇಷಣೆ ಕಾರ್ಯ ಪೂರ್ಣಗೊಂಡಿದೆ. ವಿಚಾರಣೆ ವೇಳೆ ಮೆಹ್ದಿ ನೀಡಿದ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಗೆ 6 ತಿಂಗಳು ಕಾಲಾವಕಾಶ ಇರುತ್ತದೆ. ಆದರೆ, ಮೆಹ್ದಿಯನ್ನು ಬಂಧಿಸಿ
ಒಂದೂವರೆ ತಿಂಗಳಷ್ಟೇ ಕಳೆದಿದ್ದು, ಇನ್ನು ಸಾಕಷ್ಟು ಕಾಲಾವಕಾಶವಿದೆ. ಅರೇಬಿಕ್ ಭಾಷೆಯಲ್ಲಿದ್ದ ಟ್ವಿಟ್ ಗಳನ್ನು ಭಾಷಾಂತರಿಸಲಾಗಿದ್ದು ದಾಖಲೆ ರೂಪಕ್ಕೆ ತರಬೇಕಿದೆ. ಅದಾದ ನಂತರ ಅದಷ್ಟು ಬೇಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು.
ವಿಚಾರಣೆ ವೇಳೆ ಹೆಚ್ಚಿನ ಮಾಹಿತಿ ಕಂಡು ಬಂದಲ್ಲಿ ಹೆಚ್ಟುವರಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು. ಇಂಗ್ಲೆಂಡ್ ನ ಸುದ್ದಿ ವಾಹಿನಿ ಮಾಡಿದ್ದ ವರದಿ ಆಧರಿಸಿ, ಡಿ.12ರಂದು ಜಾಲಹಳ್ಳಿಯಲ್ಲಿ ಪೊಲೀಸರು ಮೆಹ್ದಿಯನ್ನು ಬಂಧಿಸಿದ್ದರು.
Advertisement