ಕನ್ನಡದ ಸೇವೆಗೆ ಸದಾ ಸಿದ್ಧ

ಕನ್ನಡ ಹಾಗೂ ಕನ್ನಡಿಗರ ಸೇವೆಗೆ ನಾನೆಂದೂ ಸಿದ್ಧ. ಹಾಗಾಗಿ ಕನ್ನಡಾಂಬೆಯೇ ಆಕೆ ಸೇವೆಗೆ ನನ್ನನ್ನು ಕರೆಸಿಕೊಂಡಿದ್ದಾಳೆ..
ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಡಾ.ಸಿದ್ಧಲಿಂಗಯ್ಯ ಅವರಿಗೆ ಅಭಿನಂದನೆ (ಸಂಗ್ರಹ ಚಿತ್ರ)
ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಡಾ.ಸಿದ್ಧಲಿಂಗಯ್ಯ ಅವರಿಗೆ ಅಭಿನಂದನೆ (ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಡ ಹಾಗೂ ಕನ್ನಡಿಗರ ಸೇವೆಗೆ ನಾನೆಂದೂ ಸಿದ್ಧ. ಹಾಗಾಗಿ ಕನ್ನಡಾಂಬೆಯೇ ಆಕೆ ಸೇವೆಗೆ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಕವಿ ಡಾ. ಸಿದ್ಧಲಿಂಗಯ್ಯ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಸಿದ್ಧಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ದಿಗ್ಗಜರು ಸಾಕಷ್ಟಿದ್ದಾರೆ. ಆದರೂ ಕನ್ನಡಾಂಬೆ
ಸೇವೆ ಮಾಡಲು ನನಗೇ ಅವಕಾಶ ಒದಗಿ ಬಂದಿರುವುದು ಅದೃಷ್ಟವೇ ಸರಿ.

ಅದಕ್ಕೆ ಆ ತಾಯಿಗೆ ನನ್ನ ಪ್ರಣಾಮಗಳು. ನನ್ನ ಸೇವೆಯನ್ನು ಇದೇ ರೀತಿ ಮುಂದು ವರಿಸಿಕೊಂಡು ಹೋಗುತ್ತೇನೆ ಎಂದರು. ವಕೀಲ ಸಿ.ಎಚ್.ಹನುಮಂತ ರಾಯ ಮಾತನಾಡಿ,
ಸಾಕಷ್ಟು ವಿಚಾರಗಳಲ್ಲಿ ಕ್ರಾಂತಿ ಮಾಡಿದವರು ಸಿದ್ಧಲಿಂಗಯ್ಯ. ಈ ಬಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ದಲಿತ ಸಾಹಿತಿಗಳಿಗೆ ನೀಡಬೇಕೆಂಬ ಹುಡುಕಾಟದಲ್ಲಿ ಸಾಹಿತ್ಯ
ಪರಿಷತ್ತು ಇದ್ದಾಗ ಕಂಡವರು ಸಾಹಿತಿ ದೇವನೂರು ಮಹಾದೇವ ಅವರು. ಈ ಸ್ಥಾನ ನಿರಾಕರಿಸಿದ್ದರಿಂದ ಬೇರೆಯವರಿಗೆ ದೊರಕಿದೆ ಎಂಬುದು ಸುಳ್ಳು.

ಈ ಇಬ್ಬರೂ ಸಮಾನ ಮನಸ್ಕರು. ವಿಚಾರ ಜ್ಞಾನ, ಧೋರಣೆ ಎಲ್ಲವೂ ಸಮಾನವಾಗಿದೆ. ಆದರೆ, ದೇವನೂರು ಹಿರಿಯರು ಹಾಗಾಗಿ ಅವರಿಗೆ ಮೊದಲ ಆದ್ಯತೆ ನೀಡಲಾಗಿತ್ತು ಎಂದರು. ಬೆಂಗಳೂರು ವಿವಿಯ ಪ್ರೊ.ಡಾ.ಬಿ.ತಿಮ್ಮೇಗೌಡ, ಕುಲಸಚಿವರಾದ ಪ್ರೊ.ಕೆ.ಕೆ.ಸೀತಮ್ಮ, ಕನ್ನಡ ಅಧ್ಯಯನ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊಡಿ.ಜೀವನ್ ಕುಮಾರ್
ಉಪಸ್ಥಿತರಿದ್ದರು.

ಗಾಂಧಿಯನ್ನು ಮೂಲೆಗುಂಪು ಮಾಡಿದ ವಿವಿ!
ಬೆಂಗಳೂರು ವಿಶ್ವವಿದ್ಯಾಲಯದಲ್ಲೇ ರಾಷ್ಟ್ರಪಿತ ಗಾಂಧೀಜಿ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ಅಲ್ಲಿ ಯಾರಿಗೂ ಗಾಂಧೀಜಿ ಲೆಕ್ಕವಿರಲಿಲ್ಲ. ಎಲ್ಲರ ಚಿತ್ತ ಇದ್ದಿದ್ದು ಸೆನೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ಧಲಿಂಗಯ್ಯ ಅವರ ಅಭಿನಂದನಾ ಸಮಾರಂಭದೆಡೆಗೆ. ಈ ಸಮಾರಂಭದ ಗಲಾಟೆಯಲ್ಲಿ ಗಾಂಧಿ ಚಿತ್ರ ಮೂಲೆಗುಂಪಾಗಿದ್ದು ಯಾರ ಗಮನಕ್ಕೂ
ಬರಲೇ ಇಲ್ಲ. ಸೋಮವಾರ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಭಾವಚಿತ್ರವನ್ನು ಸೆನೆಟ್ ಹಾಲ್‍ಗೆ ತಂದು, ಕುರ್ಚಿಯ ಮೇಲಿಟ್ಟು, ಎಂದಿನಂತೆ ಹೂ ಹಾಕಿ ಕಾರ್ಯಕ್ರಮ ಆಚರಿಸಲಾಗಿತ್ತು. ಆದರೆ, ಅದನ್ನು ಮೊದಲ ಸ್ಥಳಕ್ಕೇ ಹಿಂದಿರುಗಿಸುವಲ್ಲಿ ಸಿಬ್ಬಂದಿ ವಿಫಲರಾಗಿದ್ದರು.

ಡಾ.ಸಿದ್ಧಲಿಂಗಯ್ಯ ಅವರಿಗೆ ವಿವಿ ಆವರಣದ ಪ್ರೊ.ವೆಂಕಟಗಿರಿ
ಸ್ಮಾರಕ ಭವನದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ, ಬೆಸ್ಕಾಂ ಆ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸೆನೆಟ್ ಹಾಲ್‍ಗೆ ಸ್ಥಳಾಂತರಿಸಲಾಯಿತು. ಆದರೆ, ಗಣರಾಜ್ಯೋತ್ಸವಕ್ಕಾಗಿ ಕುರ್ಚಿ ಮೇಲೆ ಇಟ್ಟಿದ್ದ ಗಾಂಧೀಜಿ ಅವರ ಭಾವಚಿತ್ರವನ್ನು ತರಾತುರಿಯಲ್ಲಿ ತೆಗೆದು ಡಯಾಸ್‍ನ ಹಿಂಬದಿಯ  ಮೂೂಲೆಯೊಂದಕ್ಕೆ ತಳ್ಳಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಾವ ಗಣ್ಯರಿಗೂ ಆ ಭಾವಚಿತ್ರದ ಅನಾಥ ಸ್ಥಿತಿ ಕಣ್ಣಿಗೆ ಕಾಣಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com