
ಬೆಂಗಳೂರು: ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ ಟಿಐಐ) ಅಧ್ಯಕ್ಷ ಗಜೇಂದ್ರ ಚೌಹಾಣ್ ಅವರನ್ನು ಕೂಡಲೇ ತಮ್ಮ ಸ್ಥಾನದಿಂದ ತೆರವುಗೊಳಿಸಿ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ನೇಮಿಸಬೇಕೆಂದು ಚಲನಚಿತ್ರ ಕಲಾವಿದರು ಹಾಗೂ ಎಫ್ ಟಿಐಐನ ಹಳೆ ವಿದ್ಯಾರ್ಥಿಗಳು ನಗರದ ಪುರಭವನದ ಮುಂದೆ ಗುರುವಾರ
ಪ್ರತಿಭಟನೆ ನಡೆಸಿದರು.
ಎಫ್ ಟಿಐಐ ಹಳೆ ವಿದ್ಯಾರ್ಥಿ ಹಾಗೂ ಚಲನಚಿತ್ರ ನಿರ್ದೇಶಕ ಅಭಯಸಿಂಹ ಮಾತನಾಡಿ, ಅಡೂರ್ ಗೋಪಾಲಕೃಷ್ಣನ್, ಮಹೇಶ್ ಭಟ್, ಶ್ಯಾಮ್ ಬೆನಗಲ್, ಮೃಣಾಲ್ ಸೇನ್, ಗಿರೀಶ್ ಕಾರ್ನಾಡ್, ವಿನೋದ್ ಖನ್ನಾ ಅವರಂಥ ಚಿತ್ರರಂಗದ ಖ್ಯಾತನಾಮರ ಜೊತೆಗೆ, ಸಾಹಿತ್ಯ ಕ್ಷೇತ್ರದ ಡಾ.ಯು.ಆರ್. ಅನಂತಮೂರ್ತಿ ಮತ್ತಿತರರು ಕೂಡ ಎಫ್ ಟಿಐಐ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಅಂತಹವರ ಸಾಲಿನಲ್ಲಿ ನಿಲ್ಲುವ ಯಾವ ಯೋಗ್ಯತೆಯೂ ಗಜೇಂದ್ರ ಅವರಿಗಿಲ್ಲ. ಅಲ್ಲದೆ, ಪರ್ಯಾಯ ಚಲನಚಿತ್ರಗಳ ಕುರಿತು ಅವರಿಗೆ ಅಗತ್ಯ ಜ್ಞಾನವೂ ಇಲ್ಲ. ತಕ್ಷಣವೇ ಕೂಡಲೇ ಅವರನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಸಿನಿಮಾ ಕ್ಷೇತ್ರವನ್ನು ಸಶಕ್ತಗೊಳಿಸುವಲ್ಲಿ ಎಫ್ ಟಿಐಐ ಕೊಡುಗೆ ದೊಡ್ಡದಾಗಿದ್ದು, ಈ ಸಂಸ್ಥೆಯೊಂದಿಗೆ ಗುರುತಿಸಿಕೊಂಡವರು, ಭಾರತೀಯ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ. ಇಂತಹ ಸಂಸ್ಥೆಗೆ ಅಧ್ಯಕ್ಷರಾಗಲು ಅವರಿಗೆ ಯಾವುದೇ ಅರ್ಹತೆ ಇಲ್ಲ. ಆ ಸ್ಥಾನಕ್ಕೆ ಗಜೇಂದ್ರ ಅವರನ್ನು ನೇಮಿಸಿರುವುದು ಸರಿಯಲ್ಲ ಎಂದು ದೂರಿದರು.
ಇದೇ ವೇಳೆ ಮಾತನಾಡಿದ ಚಲನಚಿತ್ರ ನಿರ್ದೇಶಕ ಬಿ. ಸುರೇಶ ಅವರು ಸಿನಿಮಾದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಪ್ರತಿನಿಧಿಸುವ ಹಾಗೂ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಾದ ವ್ಯಕ್ತಿತ್ವ ಎಫ್ ಟಿಐಐ ಅಧ್ಯಕ್ಷರಲ್ಲಿ ಇರಬೇಕು. ಆದರೆ, ಸಿನಿಮಾ ಕ್ಷೇತ್ರಕ್ಕೆ ಯಾವುದೇ ಅಮೂಲ್ಯ ಕೊಡುಗೆ ನೀಡದ ಗಜೇಂದ್ರ ಅವರನ್ನು ರಾಜಕೀಯ ಒತ್ತಡಕ್ಕೆ ಮಣಿದು ನೇಮಿಸಲಾಗಿದೆ. ಸಿನಿಮಾದ ಸಾಂಸ್ಕೃತಿಕ ಬಹುಮುಖಿತ್ವ ಕಾಪಾಡಿಕೊಂಡು ಹೋಗುವಲ್ಲಿ ಎಫ್ ಟಿಐಐ ಅತ್ಯಂತ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಗಜೇಂದ್ರ ಅವರ ನೇಮಕದಿಂದ ಅಲ್ಲಿನ ಸಾಂಸ್ಕೃತಿಕ ಬಹುಮುಖತ್ವಕ್ಕೆ ಧಕ್ಕೆಯಾಗಲಿದೆ ಎಂದರು. ವಿಮೋಚನಾ ಸಂಘ ಸಂಸ್ಥೆಯ ವಿಮಲಾ ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Advertisement