ಉಬರ್ ಕ್ಯಾಬ್ ಚಾಲಕನಿಂದ ಪ್ರಯಾಣಕಿ ಜತೆ ಅಸಭ್ಯ ವರ್ತನೆ; ಅಮಾನತು

ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿ ಆರೋಪಿ ಚಾಲಕ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.ಉಬರ್ ಕಂಪೆನಿ ಅವನನ್ನು ಸೇವೆಯಿಂದ ಅಮಾನತುಗೊಳಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೆಹಲಿಯಲ್ಲಿ ಕಾರಿನಲ್ಲಿ ಮಹಿಳಾ ಪ್ರಯಾಣಿಕರ ಜತೆ ಅತ್ಯಾಚಾರ ಪ್ರಕರಣದಿಂದ ಕುಖ್ಯಾತಿ ಪಡೆದಿರುವ ಬಹುರಾಷ್ಟ್ರೀಯ ಕಂಪೆನಿ ಉಬರ್ ಕ್ಯಾಬ್ ಚಾಲಕ ನಗರದ ಮಹಿಳೆಯೊಂದಿಗೆ ಚಲಿಸುತ್ತಿದ್ದ ಕಾರಿನಲ್ಲೇ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಸಂಬಂಧ ಮಹಿಳೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿ ಆರೋಪಿ ಚಾಲಕ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.ಉಬರ್ ಕಂಪೆನಿ ಅವನನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಘಟನೆ ವಿವರ: ಎಲೆಕ್ಟ್ರಾನಿಕ್ ಸಿಟಿ ಸಮೀಪದ ತೂಬರಹಳ್ಳಿ ನಿವಾಸಿಯಾಗಿರುವ ರೂಪಶ್ರೀ ಅವರು ನಾಗರಭಾವಿ ಸಮೀಪದ ಶ್ರೀಗಂಧಕಾವಲು ಪ್ರದೇಶದಲ್ಲಿರುವ ತಮ್ಮ ತಾಯಿ ಮನೆಗೆ ತೆರಳಬೇಕಿತ್ತು. ಹೀಗಾಗಿ, ಮೊಬೈಲು ಫೋನ್ ಉಬರ್ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ಮುಂಗಡ ಹಣ ಪಾವತಿಸಿದ್ದರು. ಶುಕ್ರವಾರ ಸಂಜೆ 6.15ರ ಸುಮಾರಿಗೆ ಚಾಲಕ ಸುರೇಶ್ ಎಂಬಾತ ರೂಪಶ್ರೀ ಅವರನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಮಹಿಳೆ ಜತೆಗೆ ಅವರ ಪುಟ್ಟ ಮಗುವು ಇತ್ತು.

ಪ್ರಯಾಣ ಆರಂಭವಾಗುತ್ತಿದ್ದಂತೆ ಫೋನ್ ಎತ್ತಿಕೊಂಡ ಚಾಲಕ, ಮೊಬೈಲ್ ಫೋನ್ ಕರೆ ಮಾಡಿ ಸ್ನೇಹಿತರೊಂದಿಗೆ ಮಾತನಾಡಲು ಆರಂಭಿಸಿದ್ದ. ಕಾರಿನಲ್ಲಿ ಮಹಿಳೆ ಇದ್ದಾರೆ ಎನ್ನುವುದು ತಿಳಿದಿದ್ದರೂ ಅವಾಚ್ಯ ಶಬ್ದಗಳನ್ನು ಬಳಸಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ.ಅಲ್ಲದೇ, ರೂಪಶ್ರೀ ಉದ್ದೇಶಿಸಿ ಫೋನ್ ನಲ್ಲಿ ಯಾರೋ ಪ್ಯಾಸೆಂಜರ್ ತುಂಬಾ ದೂರ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ. ನಮ್ಮನ್ನು ಉದ್ದೇಶಿಸಿ ಕೂಡ ಕೆಟ್ಟ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ. ಎಲ್ಲಿದ್ದೀರಿ ಎಂಬ ಸ್ನೇಹಿತರ ಪ್ರಶ್ನೆಗೆ ವಿವಿಧ ಪ್ರದೇಶಗಳ ಹೆಸರು ಹೇಳುತ್ತಿದ್ದ. ಕತ್ತಲೆಯಾಗುತ್ತಿದ್ದುದರಿಂದ ಆತನ ಮಾತುಗಳು ಕೇಳಿ ಭಯವಾಗುತ್ತಿತ್ತು. ಪ್ರಯಾಣದ ಉದ್ದಕ್ಕೂ ನನಗೆ ಭಯ ಹಾಗೂ ಅವಮಾನವಾಗಿದೆ. ಮನೆಗೆ ಬಂದ ನಂತರವೂ ನಮ್ಮ ತಾಯಿಯೊಂದಿಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಮಹಿಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸಮಯದ ಅಭಾವ ಇರುವ ಕಾರಣ ಎಫ್ ಐಆರ್ ದಾಖಲಿಸದೆ  ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ಧಿಮಾತು ಹೇಳಿ ಎಂದು ರೂಪಶ್ರೀ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com