ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರಿಗೆ ಹಣ
ಬೆಂಗಳೂರು: ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ ಸಮಯಕ್ಕೆ ಸರಿಯಾಗಿ ಪೌರಕಾರ್ಮಿಕರ ವೇತನ ಪಾವತಿಸಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್ ತಿಳಿಸಿದ್ದಾರೆ.
ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ನಂತರ ಮಾತನಾಡಿ, ಗುತ್ತಿಗೆದಾರರ ಹಣವನ್ನೇ 3 ತಿಂಗಳ ಮುಂಚಿತವಾಗಿ ಪಾವತಿಸಲಾಗುತ್ತದೆ. ವಲಯಾಧಿಕಾರಿಗಳು ಪೌರಕಾರ್ಮಿಕರಿಗೆ ಪ್ರತಿ ತಿಂಗಳು ತಡವಾಗಂದತೆ ವೇತನ ನೀಡಲು ಇದರಿಂದ ಸಾಧ್ಯವಾಗುತ್ತದೆ. ಚೆಕ್, ನಗದು ಪಾವತಿ ನಿಷೇಧಿಸಲಾಗಿದ್ದು, ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಬೊಮ್ಮನಹಳ್ಳಿಯಲ್ಲಿ ಸಹಾಯಕ ಹಣಕಾಸು ಅಧಿಕಾರಿ ಪ್ರಸನ್ನ ಹಣ ಪಾವತಿಸಲು ಲಂಚ ಬೆಡಿಕೆಯಿಟ್ಟಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಟೆರ್ರಾಫಾರ್ಮ ಹಾಗೂ ಎಂ.ಎಸ್.ಜಿ ಪಿ ಘಟಕಗಳಲ್ಲಿ ಕಸ ಹೊತ್ತೊಯ್ಯುವ ಲಾರಿ ಚಾಲಕರಿಗೆ ಊಟದ ಭತ್ಯೆ ನೀಡಲು ನಿರ್ಧರಿಸಲಾಗಿದೆ. ನ.14 ರ ನಂತರ ಮಂಡೂರಿಗೆ ಹೋಗುತ್ತಿದ್ದ ಕಸದ ಲಾರಿಗಳನ್ನು ಟೆರ್ರಾಫಾರ್ಮಾ ಹಾಗೂ ಎಂ.ಎಸ್.ಜಿ.ಪಿ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಘಟಕಗಳು ನಗರದಿಂದ ದೂರವಿದ್ದು ಕಸ ವಿಲೇವಾರಿ ಮಾಡುವ ವೇಳೆ ಲಾರಿ ಚಾಲಕರು ಘಟಕದಲ್ಲೇ ನಿಂತು ಕಾಯಬೇಕಾಗುತ್ತದೆ. ಹೀಗಾಗಿ ಚಾಲಕರಿಗೆ ದಿನಕ್ಕೆ ರೂ. 200 ಊಟದ ಭತ್ಯೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಅನಧಿಕೃತ ಒ.ಎಫ್.ಸಿ ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಪರಿಶೀಲನೆ ನಡೆಯಲಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ