ಬಿಬಿಎಂಪಿ ಚುನಾವಣೆ: ಇನ್ನೂ ಗೊಂದಲ

ರಾಜ್ಯ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಮತ್ತೆ ಸಿಲುಕಿದೆ. ಆದರೂ ಚುನಾವಣೆ ನಡೆಯುವ ಬಗ್ಗೆ ಅನಿಶ್ಚಿತತೆಯೂ ಮುಂದುವರಿದಿದೆ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಮತ್ತೆ ಸಿಲುಕಿದೆ. ಆದರೂ ಚುನಾವಣೆ ನಡೆಯುವ ಬಗ್ಗೆ ಅನಿಶ್ಚಿತತೆಯೂ ಮುಂದುವರಿದಿದೆ.

ಹೈಕೋರ್ಟ್ ಆದೇಶದಂತೆ ರಾಜ್ಯ ಚುನಾವಣಾ ಆಯೋಗ ವಾಪಸ್ ಪಡೆದಿದ್ದ ಚುನಾವಣಾ ವೇಳಾ ಪಟ್ಟಿಯನ್ನು ಗುರುವಾರ ಮತ್ತೆ ಪ್ರಕಟಿಸಿದೆ. ಆಗಸ್ಟ್ 22ರಂದು ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಆಯೋಗ ಹೇಳಿದೆ. ಈ ಮೂಲಕ ಸರ್ಕಾರಕ್ಕೆ ಚುನಾವಣೆ ಎದುರಿಸುವುದು ಅನಿವಾರ್ಯ. ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರ ಕೂಡ ಚುನಾವಣೆ ಮುಂದೂಡಲು ತೆರೆಮರೆಯ ಯತ್ನ ಮುಂದುವರಿಸಿದೆ.

ಸಾಲದಕ್ಕೆ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ ಕೂಡ ರಾಜ್ಯ ಹೈಕೋರ್ಟ್ ಕಡೆಗೆ ಹೋಗುವಂತೆ ಸೂಚಿಸಿರುವುದರಿಂದ ರಾಜ್ಯ ಸರ್ಕಾರದ ಚುನಾವಣಾ ಮುಂದೂಡಿಕೆ ಆಟಕ್ಕೆ ಕೊಂಚ ನೆರವು ಸಿಕ್ಕಿದಂತಾಗಿದೆ.

ಅಂದರೆ ಬಿಬಿಎಂಪಿ ಚುನಾವಣೆ ಬಗ್ಗೆ ಹೈಕೋರ್ಟ್‍ನಲ್ಲಿ ಇನ್ನೂ ಮೂರು ಕೇಸುಗಳು ಬಾಕಿ ಇವೆ. ಅದರಲ್ಲೂ ಮುಖ್ಯವಾಗಿ ಸರ್ಕಾರ ಸಲ್ಲಿಸಿರುವ ಮೀಸಲು ಪಟ್ಟಿಯಲ್ಲಿ ಪರಿಶಿಷ್ಟಜಾತಿ ಮತ್ತು ವರ್ಗಗಳಿಗೆ ಜನಸಂಖ್ಯೆಗೆ ಆಧಾರಿತವಾಗಿ ಅವಕಾಶ ಕಲ್ಪಿಸಿಲ್ಲ ಎಂದು ದೂರಲಾಗಿರುವ ಅರ್ಜಿ. ಇದರೊಂದಿಗೆ ಸರ್ಕಾರ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿ.

ಇನ್ನು ಬಿಬಿಎಂಪಿಯಲ್ಲಿ ಅಕ್ರಮಗಳ ಬಗ್ಗೆ ವರದಿ ನೀಡಿದ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಠಾರಿಯ ಶಿಫಾರಸುಗಳ ಬಗ್ಗೆ ಬಿಬಿಎಂಪಿಯ 198 ಸದಸ್ಯರಿಗೂ ನೋಟಿಸ್ ನೀಡಲಾಗಿತ್ತು. ಆದರೆ, ಈತನಕ ಯಾವೊಬ್ಬ ಸದಸ್ಯರೂ ನೋಟಿಸ್‍ಗೆ ಉತ್ತರ ನೀಡಿಲ್ಲ. ಆದ್ದರಿಂದ ಇದನ್ನು ಸಾರ್ವಜನಿಕ ಹಿತಾಸಕ್ತಿಯಾಗಿ ಪರಿವರ್ತಿಸಿ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯವೇ ಸೂಚಿಸಿದೆ.

ಈ ಎಲ್ಲಾ ಅರ್ಜಿಗಳು ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಹೈಕೋರ್ಟ್ ಯಾವ ತೀರ್ಪು ನೀಡುತ್ತದೆ ಎನ್ನುವುದು ಬಿಬಿಎಂಪಿ ಚುನಾವಣೆಯನ್ನು ನಿರ್ಧರಿಸುತ್ತದೆ. ಏಕೆಂದರೆ, ಸುಪ್ರೀಂಕೋರ್ಟ್ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲೇ ಪರಿಹಾರ ಪಡೆಯುವಂತೆ ಸೂಚಿಸಿದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಎರಡು ಬಾರಿಗೆ ವೇಳಾ ಪಟ್ಟಿ ಪ್ರಕಟಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರೂ ಚುನಾವಣೆ ನಡೆಯುವ ಬಗ್ಗೆ ಇನ್ನೂ ಅನುಮಾನಗಳು ಹರಿದಾಡುತ್ತಿವೆ.

ರಾಜ್ಯ ಸರ್ಕಾರ ಈಗಾಗಲೇ ಹೈಕೋರ್ಟ್ ನಿಂದ ತಪರಾಕಿ, ಛೀಮಾರಿ ಹಾಕಿಸಿಕೊಂಡಿತ್ತು. ಆರು ಸಾಲದೆಂದು ದಂಡವನ್ನೂ ಹಾಕಿಸಿಕೊಂಡು ದಾಖಲೆ ನಿರ್ಮಿಸಿತ್ತು. ಹಾಗೆಯೇ ಸುಪ್ರೀಂಕೋರ್ಟ್ ಮೊರೆ ಹೋಗಿ ಜಾಡಿಸಿಕೊಂಡಿತ್ತು. ಆದರೂ ಸರ್ಕಾರ ಚುನಾವಣೆ ಮುಂದೂಡುವ ಪ್ರಯತ್ನವನ್ನು ಮುಂದುವರಿಸಿತ್ತು. ಇದೆಲ್ಲದಕ್ಕೂ ಪೂರ್ಣ ವಿರಾಮ ಹಾಕಲು ಆಯುಗ ಈಗ ಚುನಾವಣಾ ದಿನಾಂಕ ಪ್ರಕಟಿಸಿದೆ. ಆದರೂ ಅದು ಪ್ರಯೋಜನವಾಗುತ್ತದೆ ಎನ್ನುವ ಬಗ್ಗೆ ಆಯೋಗಕ್ಕೇ ನಂಬಿಕೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಇಷ್ಟಾದರೂ ಚುನಾವಣೆ ನಡೆಯಲೇಬೇಕೆಂದು ಕಾನೂನು ಹೋರಾಟ ನಡೆಸಿದ ವ್ಯಕ್ತಿಗಳು ಹಾಗೂ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸ ಬಯಸಿರುವ ಆಕಾಂಕ್ಷಿಗಳಲ್ಲಿ ಚುನಾವಣೆ ನಡೆಯಬಹುದು ಎಂಬ ಆಸೆ ಮೂಡಿದೆ. ಹಾಗಾಗಿ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಬಿಚ್ಚಿಕೊಳ್ಳಲಿವೆ. ಆಯೋಗಕ್ಕೂ ಆತಂಕ ?: ಬಿಬಿಎಂಪಿ ಚುನಾವಣೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜುಲೈ 3 ತೀರ್ಪು ನೀಡಿತ್ತು.

ಅದು ಜು.3 ರಿಂದ ಗಣನೆ ಮಾಡಿಕೊಂಡಂತೆ 8 ವಾರಗಳ ಅವಧಿ ನೀಡಿತ್ತು. ಹೀಗಾಗಿ ಆಯೋಗ ಈ ಹಿಂದೆ ಹೈಕೋರ್ಟ್ ಆದೇಶದಂತೆ ಜೂನ್ 25ರಂದು ಹೊರಡಿಸಿದ್ದ ಚುನಾವಣಾ ದಿನಾಂಕವನ್ನು ಜುಲೈ 5ರಂದು ವಾಪಸ್ ಪಡೆದಿತ್ತು. ಆದರೆ ಅನಿವಾರ್ಯಕ್ಕೆ ಸಿಲುಕಿದ ಆಯೋಗ ಕೋರ್ಟ್ ಆದೇಶದಂತೆ ಮತ್ತೆ ದಿನಾಂಕ ಪ್ರಕಟಿಸಿದೆ. ಈ ಮೂಲಕ ಸುಪ್ರೀಂಕೋರ್ಟ್ ಸೂಚನೆಯಂತೆ ಆಗಸ್ಟ್ 28 ಒಳಗಾಗಿ ಚುನಾವಣಾ ಪೂರ್ಣಗೊಳಿಸಬೇಕಿದೆ. ಆದರೆ ಈ ಮಧ್ಯೆ ರಾಜ್ಯ ಸರ್ಕಾರ ಚುನಾವಣೆಗೆ ಸಂಬಂಧಿಸಿದಂತೆ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗುವ ಮಾತುಗಳೂ ಕೇಳಿ ಬರುತ್ತಿವೆ. ಈ ವರೆಗೂ ಪರಿಶಿಷ್ಟಜಾತಿ, ವರ್ಗದ ಆಯೋಗದ ಮೂಲಕ ಮೀಸಲು ಪಟ್ಟಿಯನ್ನು ಪ್ರಶ್ನಿಸಿ ಚುನಾವಣೆ ಮುಂದೂಡುವಂತೆ ಮಾಡಿದ್ದ ಸರ್ಕಾರ ಈಗ ಪರಿಶಿಷ್ಜರಿಗೆ ಮೀಸಲು ಅನ್ಯಾಯ ಸರಿಪಡಿಸುವುದಾಗಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಕಾಣುತಿದೆ. ಇದರೊಂದಿಗೆ ವಿಚಾರಣೆಗೆ ಬಾಕಿ ಇರುವ ಅರ್ಜಿಗಳೂ ತನಗೆ ಲಾಭ ತರುತ್ತದೆ ಎಂಬ ಆಶಯ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗ ಕೂಡ ಚುನಾವಣೆ ನಡೆಯುವ ಬಗ್ಗೆ ಆತಂತಕ್ಕೆ ಸಿಲುಕಿದೆ.

ಆಯೋಗಕ್ಕೆ ಇದು ಹೊಸದೇನಲ್ಲ

1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಮಾಡಿದಾಗಲೂ ಇದೇ ಮೀಸಲು ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆಗ ದಿನಾಂಕ ಪ್ರಕಟವಾಗಿ ಸಿದ್ಧತೆ ನಡೆಯುತ್ತಿದ್ದಾಗಲೇ ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ಮುಂದೆ ಹೋಗಿತ್ತು. 2009ರಲ್ಲಿ ಮಹಾನಗರ ಪಾಲಿಕೆ ಚುನಾವಣೆ ಮುಂದೆ ಹೋಗಿದ್ದು ವಿಚಿತ್ರ ಕಾರಣಕ್ಕೆ.

ರಾಜ್ಯ ಸರ್ಕಾರ ಚುನಾವಣೆಗಾಗಿ ಆಯೋಗಕ್ಕೆ ಸಲ್ಲಿಸಿದ್ದ ಮೀಸಲು ಪಟ್ಟಿಯನ್ನೇ ವಾಪಸ್ ಪಡೆದಿತ್ತು. ಪಟ್ಟಿಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಬೇಕೆಂದು ಸರ್ಕಾರ ಮೀಸಲು ಪಟ್ಟಿಯನ್ನು ವಾಪಸ್ ಪಡೆದಿದ್ದರಿಂದ ಮೀಸಲು ಪಟ್ಟಿಯೋ ಇಲ್ಲದೆ ಚುನಾವಣೆ ನಡೆಸುವಾದಾದರೂ ಹೇಗೆ ಎಂದು ಆಯೋಗ ಪ್ರಕಟಿಸಿದ್ದ ಚುನಾವಣಾ ವೇಳಾ ಪಟ್ಟಿಯನ್ನು ಹಿಂಪಡೆದಿತ್ತು. ಆನಂತರ ಕೋರ್ಟ್ ಮಧ್ಯಪ್ರವೇಶದಿಂದ ಮತ್ತೆ ವೇಳಾ ಪಟ್ಟಿ ಪ್ರಕಟವಾಗಿ ಚುನಾವಣೆ ನಡೆದಿತ್ತು ಎಂದು ಆಯೋಗದ ಕಾರ್ಯದರ್ಶಿ ಹೊನ್ನಾಂಬ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com