ಉತ್ತಮ ಆಡಳಿತಕ್ಕಾಗಿ ಬಿಬಿಎಂಪಿ ಪುನಾರಚನೆ

ಜನರಿಗೆ ಉತ್ತಮ ಆಡಳಿತ ನೀಡಲು ಬಿಬಿಎಂಪಿಯಲ್ಲಿ ಎರಡಕ್ಕಿಂತ ಹೆಚ್ಚು ಪಾಲಿಕೆ ರಚಿಸಿ ಪುನಾರಚನೆ ಮಾಡುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಜನರಿಗೆ ಉತ್ತಮ ಆಡಳಿತ ನೀಡಲು ಬಿಬಿಎಂಪಿಯಲ್ಲಿ ಎರಡಕ್ಕಿಂತ ಹೆಚ್ಚು ಪಾಲಿಕೆ ರಚಿಸಿ ಪುನಾರಚನೆ ಮಾಡುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಹದೇವಪುರದ ಬಿಬಿಎಂಪಿ ಕಚೇರಿ ಬಳಿ ಗುರುವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಜನರಿಗೆ ಉತ್ತಮ ಆಡಳಿತ ನೀಡಲು ಬಿಬಿಎಂಪಿ ಪುನಾರಚನೆ ಮಾಡಲಾಗುತ್ತಿದೆಯೇ ಹೊರತು ಚುನಾವಣೆಯ ಭಯದಿಂದಲ್ಲ. ಎರಡಕ್ಕಿಂತ ಹೆಚ್ಚು ಪಾಲಿಕೆ ರಚಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಕಾನೂನು ರಚಿಸಲಾಗುತ್ತಿದೆ. ಪುನಾರಚನೆಯಿಂದ ಬೆಂಗಳೂರು ಬ್ರ್ಯಾಂಡ್ ಹಾಳಾಗುತ್ತದೆ.

ನಾಡಪ್ರಭು ಕೆಂಪೇಗೌಡರಿಗೆ ಅಪಚಾರವಾಗುತ್ತದೆ ಎಂದು ಕೆಲವರು ಟೀಕಿಸಿದ್ದರು. ಆದರೆ, ಜನರಿಗೆ ಒಳ್ಳೆಯ ಆಡಳಿತ ನೀಡಲು ಮಾತ್ರ ಪುನಾರಚನೆ ಮಾಡಲಾಗುತ್ತಿದೆ. 3 ಹಂತಗಳ ವ್ಯವಸ್ಥೆಯಡಿ ಹೊಸ ವ್ಯವಸ್ಥೆ ನೀಡಲಾಗುತ್ತದೆ. ಹೀಗಾಗಿ ಬಿಬಿಎಂಪಿ ಅವಧಿ ಮುಗಿಯುವ ಸಮಯದಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ಒಂದೇ ದಿನ ರು.1,066 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಂಡೂರಿನಲ್ಲಿ ಕಸ ಹಾಕದಂತೆ ಪರ್ಯಾಯವಾಗಿ 6 ಕಸ ಸಂಸ್ಕರಣಾ ಘಟಕ ಆರಂಭಿಸಲಾಗುತ್ತಿದೆ. ಇದರಲ್ಲಿ ಎರಡು ಘಟಕ ಆರಂಭವಾಗಿದ್ದು, ಇನ್ನೂ 4 ಘಟಕ ಕೆಲವೇ ವಾರಗಳಲ್ಲಿ ಆರಂಭವಾಗಲಿವೆ. ಕೋರಮಂಗಲದಲ್ಲಿ ಒಂದೇ ಕಡೆ 60 ಟನ್ ಕಸ ಸಂಸ್ಕರಿಸುವ ಘಟಕಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮಾದರಿಯ ಘಟಕಗಳಾಗಬೇಕು ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಗರವನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗುತ್ತಿದೆ. 110 ಹಳ್ಳಿಗಳಿಗೆ ಇಂದಿಗೂ ಸರಿಯಾದ ಮೂಲಸೌಕರ್ಯ ಲಭ್ಯವಾಗಿಲ್ಲ. ಈ ಹಳ್ಳಿಗಳಿಗೆ ಜೈಕಾ ನೆರವಿನಿಂದ 10 ಟಿಎಂಸಿ ನೀರು ನೀಡುವ ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗಿದೆ ಎಂದರು. ಸಚಿವರಾದ ದಿನೇಶ್ ಗುಂಡೂರಾವ್, ರೋಷನ್ ಬೇಗ್, ಶಾಸಕರಾದ ಅರವಿಂದ ಲಿಂಬಾವಳಿ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಆಡಳಿತಾಧಿಕಾರಿ ವಿಜಯಭಾಸ್ಕರ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com