ವಿಫಲವಾಯ್ತು ಆಯುಷ್-ಸರ್ಕಾರ ಸಭೆ

ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಎನ್ ಆರ್‍ಎಚ್‍ಎಂ ಆಯುಷ್ ವೈದ್ಯರು ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದೆ...
ವಿಫಲವಾಯ್ತು ಆಯುಷ್-ಸರ್ಕಾರ ಸಭೆ (ಸಾಂದರ್ಭಿಕ ಚಿತ್ರ)
ವಿಫಲವಾಯ್ತು ಆಯುಷ್-ಸರ್ಕಾರ ಸಭೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಎನ್ ಆರ್‍ಎಚ್‍ಎಂ ಆಯುಷ್ ವೈದ್ಯರು ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ಕಾಯಂಗೆ ಆಗ್ರಹಿಸಿ ವೈದ್ಯರು ಗುರುವಾರ ಬೆಳಗ್ಗೆ ಸುಮಾರು 7 ಗಂಟೆ ವೇಳೆಗೆ ಸಚಿವ ಯು.ಟಿ. ಖಾದರ್ ಅವರ ಮನೆ ಮುಂದೆ ಕಸ ಗುಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಹಾಗೂ ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯದಿರಲು ನಿರ್ಧರಿಸಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಚಿವರು ಬುಧವಾರ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದರು.

ಮಧ್ಯಾಹ್ನ 2 ಗಂಟೆಗೆ ವಿಕಾಸಸೌಧದಲ್ಲಿ ಸಭೆ ನಡೆಯಿತು. ಈ ವೇಳೆ, ಸೇವೆ ಕಾಯಂಗೊಳಿಸಲು ಸಾಧ್ಯವಿಲ್ಲ. ಈಗ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಒಂದು ತಿಂಗಳು ಗಡುವು ನೀಡಲಾಗಿದ್ದು, ಹೊಸ ನೇಮಕ ಮಾಡಿಕೊಳ್ಳಲಾಗುವುದು. ಹೊಸ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗುವುದು. ಆಗ ಅರ್ಜಿ ಸಲ್ಲಿಸಿ ಎಂದು ಧರಣಿ ನಿರತ ವೈದ್ಯರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಸಚಿವ ಖಾದರ್. ಸರ್ಕಾರದ ಈ ನಿರ್ಧಾರದಿಂದಾಗಿ, ವೈದ್ಯರು ಈಗಿರುವ ಕೆಲಸವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸಿದ್ದು ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಗುರುವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.

ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಶಿವಲಿಂಗಪ್ಪ ಮಾತನಾಡಿ, ಸಭೆಯಲ್ಲಿ ಸಚಿವರು ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಎನ್‍ಆರ್ ಎಚ್‍ಎಂ ಯೋಜನೆ ಕೇಂದ್ರ ಸರ್ಕಾರದ್ದು, ಅದು ಸ್ಥಗಿತಗೊಂಡ ಬಳಿಕ ಎಲ್ಲರೂ ಮನೆಗೆ ಹೋಗಬೇಕು. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಅಸಹಾಯಕತನದ್ದು ಎಂದ ಅವರು, ವೇತನ ಹೆಚ್ಚಳ ಕುರಿತಂತೆ ಸಚಿವರು ಯಾವುದೇ ಅಶ್ವಾಸನೆ ನೀಡಲಿಲ್ಲ. ಎಲ್ಲರೂ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಮತ್ತೆ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಿ. ನಿಯಮಗಳ ಪ್ರಕಾರ ನೇಮಕಾತಿ ಮಾಡಿಕೊಳ್ಳಲಾಗುವುದು. ಅರ್ಹತೆ ಇರುವವರಿಗೆ ಕೆಲಸ ಸಿಗುತ್ತದೆ ಎಂದು ಬೇಜವಾಬ್ದಾರಿಯಿಂದ ಮಾತನಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com