29ಕ್ಕೆ ಲೋಕಾ ತಿದ್ದುಪಡಿ ವಿಧೇಯಕ ಮಂಡನೆ?

ಬಹು ವಿವಾದಿತ ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಜು.29ರಂದು ಮಂಡಿಸಲಿದೆ...
29ಕ್ಕೆ ಲೋಕಾ ತಿದ್ದುಪಡಿ ವಿಧೇಯಕ ಮಂಡನೆ? (ಸಾಂದರ್ಭಿಕ ಚಿತ್ರ)
29ಕ್ಕೆ ಲೋಕಾ ತಿದ್ದುಪಡಿ ವಿಧೇಯಕ ಮಂಡನೆ? (ಸಾಂದರ್ಭಿಕ ಚಿತ್ರ)

ವಿಧಾನಸಭೆ: ಬಹು ವಿವಾದಿತ ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಜು.29ರಂದು ಮಂಡಿಸಲಿದೆ.

ಲೋಕಾಯುಕ್ತ ವಿಧೇಯಕದ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದ್ದು, ಈ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸರ್ಕಾರಕ್ಕೆ ವಿಧೇಯಕ ಮಂಡನೆ ಅಸಾಧ್ಯವಾಗಿದ್ದು, ವಿಧಾನ ಮಂಡಲದ ಅಧಿವೇಶನವನ್ನು ಇನ್ನೂ ಎರಡು ದಿನ ವಿಸ್ತರಿಸಲು ಸಿದ್ಧತೆ ನಡೆಸಲಾಗಿದೆ. ಶುಕ್ರವಾರ ಬೆಳಗ್ಗೆ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.

ರಾಷ್ಟ್ರಪತಿ ಅವರ 2 ದಿನಗಳ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಜು.27, 28ರಂದು ಅ„ವೇಶನ ಇರುವುದಿಲ್ಲ. 29ರಿಂದ ಅಧಿವೇಶನ 2 ದಿನ ನಡೆದರೆ ಅಂದೇ (ಬುಧವಾರ) ಈ ವಿಧೇಯಕ ಮಂಡನೆ ಆಗಲಿದೆ. ಲೋಕಾಯುಕ್ತರು ಪ್ರತಿ ವರ್ಷ ಸರ್ಕಾರಕ್ಕೆ ವರದಿ ನೀಡುವಂತೆ ಅವಕಾಶ ಕಲ್ಪಿಸಲು ಈ ಹಿಂದೆ ತಂದಿದ್ದ ತಿದ್ದುಪಡಿ ವಿಧೇಯಕವನ್ನು ಗುರುವಾರ ಬೆಳಗ್ಗೆ ಸರ್ಕಾರ ಹಿಂಪಡೆದುಕೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅನುಪಸ್ಥಿತಿಯಲ್ಲಿ ವೈದ್ಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ವಿಧೇಯಕ ವಾಪಸ್ ಪಡೆದರು.ಜತೆಗೆ ಸಮಗ್ರ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಮುಂದಾದರು.

ಆದರೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆ.ಜಿ.ಬೋಪಯ್ಯ, ವೈ.ಎಸ್.ವಿ.ದತ್ತ, ವಿಶ್ವೇಶ್ರ ಹೆಗಡೆ ಕಾಗೇರಿ, ಸಿ.ಟಿ.ರವಿ ಪ್ರತಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಇಲಾಖಾವಾರು ಬೇಡಿಕೆ ಚರ್ಚೆ ಬಳಿಕ ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದರು. ಆದರೆ ಮಧ್ಯಾಹ್ನದ ಬಳಿಕವೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಮಂಡನೆಗೆ ಅವಕಾಶ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com