
ಬೆಂಗಳೂರು: ಒತ್ತುವರಿ ತೆರವು ಕಾರ್ಯ ಮುಂದುವರೆಸಿರುವ ಬೆಂಗಳೂರು ಜಿಲ್ಲಾಡಳಿತ ರೂ.827 ಕೋಟಿ ಮೌಲ್ಯದ 46 . 34 ಎಕರೆ ಭೂಮಿ ವಶಪಡಿಸಿಕೊಂಡಿದೆ.
ದಕ್ಷಿಣ ತಾಲೂಕು ಉತ್ತರಹಳ್ಳಿಯ ಹೊಸಕೆರೆಹಳ್ಳಿಯ ಸ.ನಂ.22 ರಲ್ಲಿ ರಿಂಗ್ ರಸ್ತೆ ಸೇರಿದಂತೆ 15 . 27 ಎಕರೆ ಒತ್ತುವರಿ ಭೂಮಿಯನ್ನು ತಹಶೀಲ್ದಾರ್ ಡಾ.ಬಿ.ಆರ್ ದಯಾನಂದ್ ನೇತೃಉವ್ತದ ತಂಡ ವಶಪಡಿಸಿಕೊಂಡಿದೆ. ಈ ಜಾಗ ಅಂದಾಜು ರೂ 800 ಕೋಟಿ ಮೌಲ್ಯ ಹೊಂದಿದೆ.
ಜಾಗದ ನಡುವೆ ರಿಂಗ್ ರಸ್ತೆ ಹಾಡು ಹೋಗಿದ್ದು ಜನನಿಬಿಡ ಪ್ರದೇಶವಾದ ಕಾರಣ ರಸ್ತೆಯ ಎರಡೂ ಬದಿಯಲ್ಲಿ ಶೆಡ್ ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿತ್ತು. ರಾಜಧಾನಿ ವೈನ್ಸ್, ಸಿಮೆಂಟ್ ಮಾರಾಟ ಮಳಿಗೆ, ಮರದ ಪೀಠೋಪಕರಣ ಶೋರೂಂ, ಗ್ರೀನ್ ಲ್ಯಾಂಡ್ ರೆಸ್ಟೋರೆಂಟ್, ಸೌದೆ ಮಂಡಿ, ರೈನ್ಬೋ ಕಾರ್ ಡೆಕೊರೇಟರ್ಸ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆಗಳು ತಾವಾಗಿಯೇ ತೆರವುಗೊಳ್ಳದಿದ್ದರೆ ಬುಧವಾರದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಉಪವಿಭಾಗಾಧಿಕಾರಿ ಎಲ್.ಸಿ ನಾಗರಾಜು, ಜಾಗದ ನಡುವೆ ವರ್ತುಲ ರಸ್ತೆ ಹಾಡು ಹೋಗಿದ್ದು ಬಹುಕೋಟಿ ಬೆಲೆ ಬಾಳುತ್ತದೆ. ಕೆಲವು ಬಾಡಿಗೆ ಮಳಿಗೆಗಳಾಗಿದ್ದು ಸ್ಥಳೀಯ ಸಂಸ್ಥೆಗಳಿಂದ ನಕಲಿ ದಾಖಲೆ ಮೇಲೆ ಖಾತಾ ಮಾಡಿಸಿಕೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಲಕ್ಷಾಂತರ ರೂ ಬಾಡಿಗೆ ಪಡೆಯಲಾಗುತ್ತಿದೆ. ಇಲ್ಲಿ ನೂತನವಾಗಿ ನಿರ್ಮಾಣವಾದ 14 ಅಂತಸ್ತಿನ ಮೂರು ವಸತಿ ಸಂಕೀರ್ಣದಲ್ಲಿ ಯಾರೂ ವಾಸವಿಲ್ಲ. ಈ ಕಟ್ಟಡವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
Advertisement