
ಬೆಂಗಳೂರು: ಬಿಬಿಎಂಪಿ ವಾಣಿಜ್ಯ ಸಂಕೀರ್ಣಗಳಲ್ಲಿರುವ ಸರ್ಕಾರಿ ಸಂಸ್ಥೆಗಳು ಉಳಿಸಿಕೊಂಡಿರುವ ರು.17.53 ಕೋಟಿ ಬಾಡಿಗೆ ಮೊತ್ತವನ್ನು ತಕ್ಷಣವೇ ಪಾವತಿಸದಿದ್ದರೆ ಕಚೇರಿಗಳಿಗೆ ಬೀಗ ಜಡಿಯಲಾಗುವುದು ಎಂದು ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಇಲಾಖೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರೈಲ್ವೆ, ಪೊಲೀಸ್, ಆರ್‍ಟಿಒ, ಬಿಎಸ್‍ಎನ್ ಎಲ್, ಅಳತೆ ಮತ್ತು ತೂಕ ಮಾಪನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಜಯಭಾಸ್ಕರ್ ಹಾಗೂ ಆಯುಕ್ತ ಕುಮಾರ್ ನಾಯಕ್ ಸಭೆ ನಡೆಸಿದರು. ವಿವಿಧ ವಾಣಿಜ್ಯ ಸಂಕೀರ್ಣ ಹಾಗೂ ಮಾರುಕಟ್ಟೆಗಳಲ್ಲಿ ಇಲಾಖೆಗಳು ಕಚೇರಿ ಬಾಡಿಗೆ ಪಡೆದಿದ್ದು, ಹಲವು ವರ್ಷಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿವೆ. ಕೆಲವು ಇಲಾಖೆಗಳ ಬಾಕಿ ರು.1 ಕೋಟಿಯವರೆಗೂ ತಲುಪಿದೆ. ಶೀಘ್ರವೇ ಬಾಕಿ ಪಾವತಿಸದಿದ್ದರೆ ಕಚೇರಿಗಳಿಗೆ ಬೀಗ ಹಾಕುವಂತೆ ಮಾರುಕಟ್ಟೆ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸೂಚಿಸಿದರು.
ಬಿಎಸ್‍ಎನ್‍ಎಲ್, ರೈಲ್ವೆ, ಆರ್‍ಟಿಒ, ಮೀನುಗಾರಿಕೆ, ಕಾವೇರಿ ಹ್ಯಾಂಡಿ ಕ್ರಾಫ್ಟ್, ಕೃಷಿ ಮಾರಾಟ ವಿಭಾಗ, ಕೆಎಸ್‍ಎಫ್ ಸಿ, ಸಣ್ಣ ನೀರಾವರಿ ಸೇರಿದಂತೆ ಕೆಲವು ಇಲಾಖೆಗಳು
ಪಾಲಿಕೆಯ ವಾಣಿಜ್ಯ ಸಂಕಿರ್ಣಗಳಲ್ಲಿ ಮಳಿಗೆ ಬಾಡಿಗೆ ಪಡೆದು ನಿಗದಿತ ಸಮಯದಲ್ಲಿ ಬಾಡಿಗೆ ಪಾವತಿಸಿಲ್ಲ. ಪಾಲಿಕೆಯಿಂದ ಹಲವು ಬಾರಿ ಬೇಡಿಕೆ ನೋಟಿಸ್ ಕಳುಹಿಸಿದರೂ ಸಂಸ್ಥೆಗಳು
ಸ್ಪಂದಿಸಿಲ್ಲ. ಹಲವು ವರ್ಷಗಳಿಂದ ಉಳಿಸಿಕೊಂಡ ಬಾಕಿ ಒಟ್ಟು ರು.17 ಕೋಟಿಯಾಗಿದ್ದು, ಕೂಡಲೇ ಅಂತಿಮ ನೋಟಿಸ್ ಜಾರಿ ಮಾಡಬೇಕು ಎಂದು ಮಾರುಕಟ್ಟೆ ವಿಭಾಗದ ಕಂದಾಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಬಿಬಿಎಂಪಿಯ ವಾಣಿಜ್ಯ ಸಂಕೀರ್ಣಗಳಲ್ಲಿ ಸುಮಾರು 6,000 ಮಳಿಗೆಗಳಿದ್ದು, ಬಾಡಿಗೆ ಪಾವತಿಸುವಂತೆ ಮಾಲಿಕರಿಗೆ ಪ್ರತಿ ತಿಂಗಳು ನೋಟಿಸ್ ಜಾರಿ ಮಾಡಬೇಕು. ಅಧಿಕಾರಿಗಳು ಒಂದು ವಾರದಲ್ಲಿ ನೋಟಿಸ್ ಜಾರಿ ಮಾಡಿ ಅದರ ಪ್ರತಿಗಳನ್ನು ಮಾರುಕಟ್ಟೆ ವಿಭಾಗದ ಉಪ ಆಯುಕ್ತರಿಗೆ ಸಲ್ಲಿಸಬೇಕು. ನಿಗದಿಪಡಿಸಿದ ಬಾಡಿಗೆ ವಸೂಲಿ ಮಾಡಿ ಗುರಿ ಮುಟ್ಟದಿದ್ದರೆ,
ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಭಾಸ್ಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Advertisement