
ಬೆಂಗಳೂರು: ಬಿಬಿಎಂಪಿಯ ವಿವಿಧ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಆಯುಕ್ತ ಜಿ.ಕುಮಾರ್ ನಾಯಕ್, ಅಧಿಕಾರಿಗಳು ಹಾಗೂ ನೌಕರರು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಿರಬೇಕು ಎಂದು ಸೂಚಿಸಿದ್ದಾರೆ.
ನಗರ ಯೋಜನೆ, ಜಾಹೀರಾತು, ಘನತ್ಯಾಜ್ಯ ವಿಲೇವಾರಿ, ಲೆಕ್ಕಪತ್ರ, ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು, ಕಚೇರಿಯಲ್ಲಿ ಹಾಜರಿರದ ಅಧಿಕಾರಿ ಹಾಗೂ ನೌಕರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಮುಂದೆ ಅಧಿಕಾರಿ ಹಾಗೂ ನೌಕರರು ಕುಳಿತುಕೊಳ್ಳುವ ಮೇಜಿನ ಮೇಲೆ ಹುದ್ದೆ ಹಾಗೂ ಹೆಸರು ಇರುವ ನಾಮಫಲಕಗಳನ್ನು ಕಡ್ಡಾಯವಾಗಿ ಇಡಬೇಕು. ಯಾವುದೇ ಮೇಜು ಖಾಲಿ ಇರಬಾರದು. ಒಂದು ವೇಳೆ ಕಚೇರಿ ಬಿಟ್ಟು ಹೊರಗೆ ಹೋಗುವುದಿದ್ದರೆ, ಎಲ್ಲಿಗೆ, ಯಾವ ಕೆಲಸಕ್ಕೆ ಎಂದು ಬರೆದಿಟ್ಟು ಹೋಗಬೇಕು.
ಕೆಲವು ಅಧಿಕಾರಿಗಳು ತಪಾಸಣೆ ಎಂಬ ನೆಪ ಹೇಳಿ ಸಮಯ ವ್ಯರ್ಥ ಮಾಡುತ್ತಾರೆ. ಹೀಗಾಗಿ ತಪಾಸಣೆಗೆ ಹೋಗುವ ಅಧಿಕಾರಿಗಳ ಹೆಸರನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗುವುದು.
ತಪಾಸಣೆಗೆ ಹೋಗದಿರುವವರ ಮತ್ತೊಂದು ಪಟ್ಟಿಯನ್ನೂ ಸಿದ್ಧಪಡಿಸಲಾಗುತ್ತದೆ. ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದ್ದು, ಯಾರು, ಯಾವ ಸಮಯಕ್ಕೆ ಕಚೇರಿಗೆ ಬರುತ್ತಾರೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ತಡವಾಗಿ ಬಂದ ನೌಕರರ ಮೇಲೆ ಕೆಪಿಎಸ್‍ಆರ್ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ನಾಯಕ್ ಎಚ್ಚರಿಸಿದರು.
ಕಚೇರಿಗಳ ಕಾರಿಡಾರ್ ಹಾಗೂ ಒಳ ಆವರಣ ಶುದ್ಧವಾಗಿರಬೇಕು. ಅನವಶ್ಯಕ ಕಾಗದಪತ್ರ, ಅಲ್ಮೇರಾ, ಹಳೆಯ ಕಂಪ್ಯೂಟರ್ ಸೇರಿದಂತೆ ಬಳಸದಿರುವ ಸಾಮಗ್ರಿಗಳನ್ನು ಕಚೇರಿಯಲ್ಲಿ ಇಟ್ಟುಕೊಳ್ಳಬಾರದು. ಯಾವುದೇ ಕಚೇರಿಯಲ್ಲಿ ಕಡತಗಳನ್ನು ಕೊಳೆಸದೆ ಸಾಧ್ಯವಾದಷ್ಟು ಶೀಘ್ರ ವಿಲೇವಾರಿ ಮಾಡಬೇಕು. ಮೇಜು, ಕುರ್ಚಿಗಳನ್ನು ಶುಚಿಯಾಗಿಟ್ಟುಕೊಂಡು, ಸಾರ್ವಜನಿಕರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಬೇಕು ಎಂದು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದರು.
Advertisement