
ಬೆಂಗಳೂರು: ಎಚ್‍ಎಎಲ್‍ನ ಯಮಲೂರು ಸಮೀಪ ರಾಜಕಾಲುವೆಗೆ ಬಿದ್ದು 10 ವರ್ಷದ ಬಾಲಕ ಜುನೈದ್ ಮೃತಪಟ್ಟಿರುವ ಪ್ರಕರಣ ಸಂಬಂಧ ಬಿಬಿಎಂಪಿ ಆಯುಕ್ತರು ಹಾಗೂ ಸಂಬಂಧಪಟ್ಟ ವಲಯದ ಜಂಟಿ ಆಯುಕ್ತರಿಗೆ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜಕಾಲುವೆಗಳಿಗೆ ನೆಲಮಟ್ಟದಿಂದ 6 ಅಡಿ ಎತ್ತರದ ಕಬ್ಬಿಣದ ತಂತಿ ತಡೆಗೋಡೆ ನಿರ್ಮಿಸಬೇಕು. ಅಲ್ಲದೇ ಅಪಾಯಕಾರಿಯಾಗಿರುವ ಜಾಗದಲ್ಲಿ ರೇಡಿಯಂ ಅಕ್ಷರಗಳಿಂದ ಬರೆದಿರುವ ಎಚ್ಚರಿಕೆ ಸೂಚನಾ ಫಲಕ ಅಂಟಿಸಬೇಕು ಎಂದು 2015, ಏಪ್ರಿಲ್‍ನಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಸಂಬಂಧಪಟ್ಟ ಎಂಜಿನಿಯರ್ ಗಳೊಂದಿಗೆ ನಡೆದ ಸಭೆಯಲ್ಲಿ ಲೋಕಾಯುಕ್ತರು ನಿರ್ದೇಶನ ನೀಡಿದ್ದರು.
ಸೂಚನೆ ಪಾಲಿಸಲು ಮೇ 25 ಗಡುವು ನೀಡಲಾಗಿತ್ತು. ಆದರೆ, ಲೋಕಾಯುಕ್ತರ ನಿರ್ದೇಶನವನ್ನು ಪಾಲಿಸುವಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಎಂಜಿನಿಯರ್‍ಗಳು ವಿಫಲರಾಗಿದ್ದಾರೆ. ಹೀಗಾಗಿಯೇ ತಡೆಗೋಡೆ ಇಲ್ಲದ ರಾಜ ಕಾಲುವೆ ಬಳಿ ಚೆಂಡು ಹಿಡಿಯಲು ಹೋಗಿ ಬಾಲಕ ಜುನೈಲ್ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ ಹಾಗೂ ನಿರ್ದೇಶನಗಳನ್ನು ಪಾಲನೆ ಮಾಡದಿರುವ ಬಗ್ಗೆ ಜೂ.9ರೊಳಗೆ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತರು ಹಾಗೂ ಸಂಬಂಧಪಟ್ಟ ವಲಯದ ಜಂಟಿ ಆಯುಕ್ತರಿಗೆ ಲೋಕಾಯುಕ್ತರು ನೋಟಿಸ್ ನೀಡಿದ್ದಾರೆ.
Advertisement