
ಬೆಂಗಳೂರು: ನಗರದ ಬೆಳ್ಳಂದೂರು ಕೆರೆ ನೊರೆಗೆ ಅಪಾರ್ಟ್‍ಮೆಂಟ್ ಅಶುಚಿ ಮತ್ತು ಶಾಂಪೂ ಕಾರಣವಂತೆ...!
ಹೀಗೆಂದು ಹೇಳಿದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಿಜಯ್ ಕುಮಾರ್. ಅರಣ್ಯ ಸಚಿವ ರಮಾನಾಥ್ ರೈ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರು ಕೆರೆ ನೊರೆ ಬಗ್ಗೆ ಪ್ರಶ್ನಿಸಿದರು. ಆಗ `ಈ ಬಗ್ಗೆ ನಮ್ಮ ವಿಜಯ್ ಕುಮಾರ್ ಮಾಹಿತಿ ನೀಡುತ್ತಾರೆ' ಎಂದು ಸಚಿವರು ಸದಸ್ಯ ಕಾರ್ಯದರ್ಶಿ ಅವರತ್ತ ಕೈ ತೋರಿದರು. ಆಘ ಮಾಧ್ಯಮದವರಿಗೆ ವಿವರಣೆ ನೀಡಿದ ವಿಜಯ್ ಕುಮಾರ್ ಈ ಮಾಹಿತಿ ನೀಡಿದ್ದಾರೆ.
ಕೆರೆಯಲ್ಲಿ ನೊರೆ ಬರುವುದಕ್ಕೆ ಮುನ್ನವೇ ನಾವು ಅಲ್ಲಿಗೆ ಭೇಟಿ ನೀಡಿದ್ದೇವೆ. ಬಳಿಕ ಮತ್ತೆ ಪರಿಶೀಲನೆ ನಡೆಸಿದ್ದೇವೆ. ಇದಕ್ಕೆ ಕೈಗಾರಿಕೆ ತ್ಯಾಜ್ಯ ಕಾರಣವಲ್ಲ. ಕೈಗಾರಿಕಾ ತ್ಯಾಜ್ಯ ಈ ಕೆರೆಗೆ ಸೇರುವುದೇ ಇಲ್ಲ. ಬೆಳ್ಳಂದೂರು ಕೆರೆ ಸುತ್ತಮುತ್ತ 50ಕ್ಕೂ ಹೆಚ್ಚು ಅಪಾರ್ಟ್‍ಮೆಂಟ್‍ಗಳಿವೆ. ಇಲ್ಲಿ ಬಳಕೆಯಾದ ನೀರನ್ನು ಸಂಸ್ಕರಣೆ ಮಾಡುತ್ತಿಲ್ಲ. ಹೀಗಾಗಿ ಅಶುದ್ಧ ನೀರು, ಬಳಕೆಯಾದ ಶಾಂಪೂ ನೀರು ಕೆರೆಯನ್ನು ಸೇರಿ ನೊರೆ ಸೃಷ್ಟಿಸಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಜಲಮಂಡಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಚನೆ ನೀಡ
ಲಾಗಿದೆ. ಬೆಂಗಳೂರು ನಗರದಲ್ಲಿ ಸಂಸ್ಕರಣಾ ಘಟಕಗಳು (ಎಸ್‍ಟಿಪಿ ) ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಎಸ್‍ಟಿಪಿ ರಚಿಸುವಂತೆ ಸೂಚನೆ ನೀಡಿದ್ದೇವೆ ಎಂದರು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನಾಚಾರ್ಯ ಹಾಜರಿದ್ದರು.
Advertisement