ಆಡಳಿತಾಧಿಕಾರಿ, ಆಯುಕ್ತರ ಎದುರು ಸಮಸ್ಯೆ ಸುರಿಮಳೆ

ಬಿಬಿಎಂಪಿ ಆಡಳಿತಾಧಿಕಾರಿ ವಿಜಯ ಭಾಸ್ಕರ್ ಹಾಗೂ ಆಯುಕ್ತ ಜಿ.ಕುಮಾರ್ ನಾಯಕ್ ಗುರುವಾರ ಪಶ್ಚಿಮ ವಲಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದರು...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿ ವಿಜಯ ಭಾಸ್ಕರ್ ಹಾಗೂ ಆಯುಕ್ತ ಜಿ.ಕುಮಾರ್ ನಾಯಕ್ ಗುರುವಾರ ಪಶ್ಚಿಮ ವಲಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದರು.

ಸಭೆಯಲ್ಲಿ ಸಾರ್ವಜನಿಕರು ಫುಟ್‍ಪಾತ್ ವ್ಯಾಪಾರ, ನಾಯಿಗಳ ಕಾಟ, ಹೋಟೆಲ್‍ವೊಂದರ ಗಲೀಜು ನೀರು ರಸ್ತೆಗೆ, ಆರ್‍ಟಿಐಗೆ ಪತ್ರ ಸಲ್ಲಿಸಿದವರಿಗೆ ಬೆದರಿಕೆ, ಮುನ್ನೆಚ್ಚರಿಕೆಗಾಗಿ ಮರಗಳ ಸರ್ವೆ, ನಗರದ ಕಟ್ಟಡದ ನಕ್ಷೆ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಸಾರ್ವಜನಿಕರು ಕುಂದು ಕೊರತೆಗಳನ್ನು ಸಭೆಯಲ್ಲಿ ಹೇಳಿಕೊಂಡರು.

ಸೇವ್ ಸ್ಯಾಂಕಿ ಟ್ಯಾಂಕ್ ಟ್ರಸ್ಟ್ ಅಧ್ಯಕ್ಷ ಚಿದಾನಂದ ಕುಲಕರ್ಣಿ ಮಾತನಾಡಿ, ಸ್ಯಾಂಕಿ ಕೆರೆಯ ದಡದಲ್ಲಿ ಮಂತ್ರಿ ಮಾಲ್‍ನವರಿಂದ ಕಟ್ಟಡ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ವೇಳೆ ಕೆರೆ ಸ್ಥಳದಲ್ಲಿ ಅವಕಾಶ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ವೀರಣ್ಣಗೌಡ ಮಾತನಾಡಿ, ಮಲ್ಲೇಶ್ವರ ಇದೀಗ ವಾಣಿಜ್ಯ ಪ್ರದೇಶವಾಗಿ ಪರಿವರ್ತಿತವಾಗುತ್ತಿದೆ. ಫುಟ್ ಪಾತ್‍ಗಳಲ್ಲಂತೂ ವ್ಯಾಪಾರ ಹೆಚ್ಚಾಗಿದೆ. ಇಲ್ಲೊಂದು ಮಾಫಿಯಾ ಇದೆ. ಬಡಪಾಯಿ ವ್ಯಾಪಾರಿ ಬದುಕಿಕೊಳ್ಳಲಿ ಬಿಡಿ ಎನ್ನುವಷ್ಟರ ಮಟ್ಟಿಗೆ ಅನುಕಂಪವಿದೆ.

ಫುಟ್‍ಪಾತ್ ನಲ್ಲಿ ವ್ಯಾಪಾರ ನಡೆಸಲು ಸಾಧ್ಯವೆ? ವೈಯಾಲಿಕಾವಲ್ ನಲ್ಲಿ 32 ಮನೆಗಳ ಚರ್ಮಗಾರರ ಕಾಲೋನಿ ಇದೆ. ಅಲ್ಲಿ ಶೌಚಾಲಯವಿಲ್ಲ, ಹದಗೆಟ್ಟ ರಸ್ತೆಗಳು, ಇಲ್ಲಿಗೆ ಭೇಟಿ ಕೊಟ್ಟು ಸಮಸ್ಯೆ ಪರಿಹರಿಸಿ ಎಂದರು. 1947 ಹೋಟೆಲ್‍ನ ಗಲೀಜು ನೀರು ಫುಟ್‍ಪಾತ್‍ನಲ್ಲಿ ಹರಿಯುತ್ತಿದೆ. ನೀರು ಅಲ್ಲಿಯೇ ನಿಲ್ಲುವುದರಿಂದ ಕಲ್ಲುಗಳೇ ಕಿತ್ತು ಹೋಗಿವೆ. ಮಲ್ಲೇಶ್ವರದ ಹಳೆಯ ಮನೆಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಅವೆಲ್ಲವೂ ಈಗ ಅನಧಿಕೃತವಾಗಿ ಪರಿವರ್ತಿತಗೊಂಡು ವಾಣಿಜ್ಯ ಕಟ್ಟಡಗಳಾಗಿವೆ. ಹಾಗಾಗಿ ಸಂಚಾರದ ಸಮಸ್ಯೆ ಹೆಚ್ಚುತ್ತಿವೆ ಎಂದು ವಾಸುತೀರ್ಥ ಎಂಬುವರು ಆಡಳಿತಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ದನಿಗೂಡಿಸಿದ ರಾಮಸ್ವಾಮಿ, ಮನೆಗಳು ವಾಣಿಜ್ಯ ಚಟುವಟಿಕೆಗಳಿಗೆ ಪರಿವರ್ತಿತವಾಗುತ್ತಿರುವ ಬಗ್ಗೆ ಹಲವು ಬಾರಿ ಬಿಬಿಎಂಪಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು. ಮಲ್ಲೇಶ್ವರದಲ್ಲಿ ಮಾತ್ರವೇ ಏಕೆ ಪ್ರತಿಷ್ಠಿತ ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ಕೌಶಿಕ್ ಅವರು ಪ್ರಶ್ನಿಸಿದರು. ಈ ಭಾಗದಲ್ಲಿ ಮಂತ್ರಿ ಮಾಲ್, ಬಿಜೆಪಿ ಕಚೇರಿ, ಸಿಇಟಿ ಕಚೇರಿ ಅಲ್ಲದೇ ಮತ್ತಿತರ ಪ್ರತಿಷ್ಠಿತ ಅಂಗಡಿಗಳು ಇರುವುದರಿಂದ ಮಲ್ಲೇಶ್ವರದ ಎಲ್ಲ ರಸ್ತೆಗಳು, ವಾಹನಗಳಿಂದಲೇ ತುಂಬಿ ಹೋಗಿವೆ ಎಂದರು.

ಸುಮಾರು 50 ವರ್ಷಗಳಿಂದ ಫುಟ್‍ಪಾತ್‍ನಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ನಾವು ಬಲಾಢ್ಯರಲ್ಲ, ಆದರೆ, ಬೇರೆಯವರು ಮಾರುಕಟ್ಟೆಗಳಲ್ಲಿ ಎರಡಕ್ಕಿಂತ ಹೆಚ್ಚು ಅಂಗಡಿಗಳನ್ನು ಪಡೆದು ಬಾಡಿಗೆಗೂ ನೀಡಿದ್ದಾರೆ. ನಮಗೂ ಅಂಗಡಿ ಕೊಡಿಸಿ ಎಂದು ಒಂದಿಬ್ಬರು ವ್ಯಾಪಾರಿಗಳು ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದರು. ಸುಶೀಲಾ ವಾಸುದೇವರಾವ್ ಅವರು, ನಗರದಲ್ಲಿರುವ ಒಣ ಮರಗಳ ಸರ್ವೆ ಮಾಡಿ, ಬೇರುಗಳು ಸಡಿಲಗೊಂಡ ಮರಗಳನ್ನು ತೆರವುಗೊಳಿಸಿ ಎಂದು ಮನವಿ ಮಾಡಿದರು. ಬಿಬಿಎಂಪಿ ನನ್ನ ತಂದೆಗೆ ನಿವೇಶನ ನೀಡಿದೆ. ಆದರೆ ಅದನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದು ನನ್ನ ತಂದೆಯವರ ಆಸ್ತಿ ಎಂದು ಹೇಳಿದರೂ ಕೇಳುತ್ತಿಲ್ಲ. ದಯವಿಟ್ಟು ಒತ್ತುವರಿ ತೆರವುಗೊಳಿಸಿ ಎಂದು ಮೋಹನ್ ಆಯುಕ್ತರಲ್ಲಿ ಅವಲತ್ತುಕೊಂಡರು.

ದಯಾನಂದನಗರ ಸ್ಲಂನಲ್ಲಿ ಇರುವ ಬಡವರಿಗೆ ಬಿಬಿಎಂಪಿ ಯಾವುದೇ ಸವಲತ್ತು ಕಲ್ಪಿಸಿಲ್ಲ. ಶ್ರೀರಾಂಪುರ, ಭಾಷ್ಯಂ ವೃತ್ತದಲ್ಲಿರುವ ಹೆರಿಗೆ ಆಸ್ಪತ್ರೆಗೆ ಕರೆದೊಯ್ದರೆ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಿ ಎಂದು ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಪುಕ್ಕಟ್ಟೆ ಸಲಹೆ ಕೊಡುತ್ತಾರೆ ಎಂದು ನಾಗಣ್ಣ ಸಿಟ್ಟಿನಿಂದಲೇ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಸಿ.ಎನ್.ಅಶ್ವತ್ಥನಾರಾಯಣ, ಪಶ್ಚಿಮ ವಲಯದ ಜಂಟಿ ಆಯುಕ್ತ ಲಕ್ಷ್ಮಿನರಸಯ್ಯ ಹಾಗೂ ಆರೋಗ್ಯ ಇಲಾಖೆಯ ಡಾ.ಯತೀಶ್ ಕುಮಾರ್ ಉಪಸ್ಥಿತರಿದ್ದರು.

ಸಮಸ್ಯೆ ಇದ್ದರೆ ಕರೆ ಮಾಡಿ
ಪೌರ ಕಾರ್ಮಿಕರು ಸರಿಯಾಗಿ ಕಸ ಗುಡಿಸುವುದಿಲ್ಲ, ಹೇಳಿದರೆ ಗುತ್ತಿಗೆದಾರರು 4 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ನಾಯಿಗಳ ಕಾಟ ಇದೆ ಎಂದು ಶ್ರೀರಾಂಪುರದ ಶಾರದಾ ಅವರು ಅಸಮಾಧಾನ ವ್ಯಕ್ತಪಡಿಸಿದರು. ನಾಗರಿಕರ ಎಲ್ಲ ಸಮಸ್ಯೆಗಳಿಗೆ ಆದಷ್ಟು ಶೀಘ್ರ ಪರಿಹಾರ ಒದಗಿಸಲಾಗುವುದು ಹಾಗೂ ಅಗತ್ಯವಿದ್ದೆಡೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಆಡಳಿತಾಧಿಕಾರಿಗಳು ಮತ್ತು ಆಯುಕ್ತರು ಹೇಳಿದರು. ಸಾರ್ವಜನಿಕರು ತಮ್ಮ ಯಾವುದೇ ಕುಂದು ಕೊರತೆ ಇದ್ದಲ್ಲಿ ಕೂಡಲೇ ಬಿಬಿಎಂಪಿಯ ಸಹಾಯವಾಣಿ 080-22660000 ಸಂಪರ್ಕ ಮಾಡಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.\

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com