ಜಾಹೀರಾತು ಮುಕ್ತ ನಗರ: ವಸ್ತುಸ್ಥಿತಿ ವಿವರಣೆಗೆ ಸೂಚನೆ

ನಗರವನ್ನು ಜಾಹೀರಾತು ಮುಕ್ತಗೊಳಿಸಲು ಬಿಬಿಎಂಪಿ ಕೈಗೊಂಡಿದ್ದ ನಿರ್ಣಯದ ವಸ್ತುಸ್ಥಿತಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚಿಸಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: ನಗರವನ್ನು ಜಾಹೀರಾತು ಮುಕ್ತಗೊಳಿಸಲು ಬಿಬಿಎಂಪಿ ಕೈಗೊಂಡಿದ್ದ ನಿರ್ಣಯದ ವಸ್ತುಸ್ಥಿತಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚಿಸಿದೆ.

ನಗರದಲ್ಲಿ ಅನಧಿಕೃತ ಜಾಹೀರಾತು ಹಾವಳಿ ತಪ್ಪಿಸಬೇಕೆಂದು ಕೋರಿ ವಿವೇಕಾನಂದ ಶೆಟ್ಟಿ ಎಂಬುವರು ಪಿಐಎಲ್ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ಪೀಠ, ಬಿಬಿಎಂಪಿ ಮಾಡಿರುವ ಶಿಫಾರಸಿಗೆ ಸರ್ಕಾರದ ತೀರ್ಮಾನವೇನು? ಶಿಫಾರಸಿನ ಸದ್ಯದ ವಸ್ತುಸ್ಥಿತಿ ಏನು ಎಂಬುದರ ಕುರಿತು ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶಿಸಿತು.

ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿ ವಕೀಲರುವಾದಿಸಿ, ನಗರದಲ್ಲಿ ಜಾಹೀತುಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ನಗರವನ್ನು ಜಾಹೀರಾತು ಮುಕ್ತವಾಗಿಸಲು ಕಳೆದ ಜನವರಿಯಲ್ಲಿ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ಈ ಕುರಿತು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಆ ನಿರ್ಣಯ ಜಾರಿಯಾದರೆ ನಗರದಲ್ಲಿ ಯಾವುದೇ ಜಾಹೀರಾತು, ಹೋಲ್ಡಿಂಗ್ ಅಥವಾ ಪೋಸ್ಟರ್ ಹಾಕಲಾಗುವುದಿಲ್ಲ ಎಂದರು.

ಅರ್ಜಿದಾರರ ಪರ ವಕೀಲರು ಇದಕ್ಕೆ ಪ್ರತಿಕ್ರಿಯಿಸಿ, ನಗರ ವ್ಯಾಪ್ತಿಯಲ್ಲಿ ಯಾವುದೇ ಜಾಹೀರಾತು ಹಾಕದಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನ್ಯಾಯಾಲಯ ನಿರ್ದೇಶಿಸಿದರೆ ಸಾಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಸದ್ಯ ಈ ವಿಚಾರವಾಗಿ ತಮ್ಮಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಕಾಲಾವಕಾಶ ನೀಡಿದರೆ ಸರ್ಕಾರದಿಂದ ಅಗತ್ಯ ಮಾಹಿತಿ ಹಾಗೂ ಸೂಚನೆ ಪಡೆದು ಕೋರ್ಟ್‍ಗೆ ತಿಳಿಸುವುದಾಗಿ ಹೇಳಿದರು.ಸರ್ಕಾರಿ ವಕೀಲರ ಹೇಳಿಕೆ ಪರಿಗಣಿಸಿದ ಪೀಠ, ವಿಚಾರಣೆ 4 ವಾರಗಳ ಕಾಲ ಮುಂದೂಡಿತು.

ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ: ವಿಚಾರಣೆ ವೇಳೆ ಬೆಂಗಳೂರು ನಗರವನ್ನು ಜಾಹೀರಾತು ಫಲಕಗಳಿಲ್ಲದಂತೆ ಮಾಡುತ್ತಾರಂತಲ್ಲಾ ಇದಕ್ಕೆ ಏನಂತೀರಿ ಎಂದು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ಸರ್ಕಾರಿ ವಕಾಲರನ್ನು ಅಚ್ಚರಿಯಿಂದ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ಪ್ರಧಾನ ವಕೀಲ ಆರ್.ದೇವರಾಜ್, ಇದಕ್ಕೆ ಸಂಬಂಧಿಸಿದ ವಿವರಗಳು ಅಡ್ವೋಕೇಟ್ ಜನರಲ್ ಕಚೇರಿಗೆ ಇನ್ನೂ ಲಭ್ಯವಾಗಿಲ್ಲ. ಆದ್ದರಿಂದ ಮುಂದಿನ ವಿಚಾರಣೆ ವೇಳೆಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com